ಮುಂಬೈ (ಪಿಟಿಐ/ಐಎಎನ್‌ಎಸ್): ಕಳೆದ ಕೆಲವು ದಿನಗಳಿಂದ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಶಿವಸೇನೆ ಮುಖ್ಯಸ್ಥ ಬಾಳಾ ಸಾಹೇಬ ಠಾಕ್ರೆ ಅವರು ಬಾಂದ್ರಾ ಉಪನಗರದಲ್ಲಿರುವ ತಮ್ಮ ನಿವಾಸ `ಮಾತೋಶ್ರೀ~ಯಲ್ಲಿ ಶನಿವಾರ ಮಧ್ಯಾಹ್ನ ಕೊನೆಯುಸಿರೆಳೆದರು.
ಇದರ ಬೆನ್ನಲ್ಲೇ ಮುಂಬೈ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಕಟ್ಟೆಚ್ಚರವಹಿಸಲಾಗಿದೆ.
ಠಾಕ್ರೆ ಅವರಿಗೆ 86 ವರ್ಷ ವಯಸ್ಸಾಗಿತ್ತು. `ನಾವು ಠಾಕ್ರೆ ಅವರನ್ನು ಉಳಿಸಿಕೊಳ್ಳಲು ಕೈಲಾದ ಪ್ರಯತ್ನ ಮಾಡಿದೆವು. ಆದರೆ ಫಲಿಸಲಿಲ್ಲ. ಮಧ್ಯಾಹ್ನ 3.30ರ ಹೊತ್ತಿಗೆ ಅವರ ಉಸಿರು ನಿಂತು ಹೋಯಿತು~ ಎಂದು ಚಿಕಿತ್ಸೆ ನೀಡುತ್ತಿದ್ದ ಲೀಲಾವತಿ ಆಸ್ಪತ್ರೆಯ ಡಾ. ಜಲೀಲ್ ಪಾರ್ಕರ್ ತಿಳಿಸಿದರು.
ಕಳೆದ ಎರಡು ವರ್ಷಗಳಿಂದಲೂ ಠಾಕ್ರೆ ಆರೋಗ್ಯ ಕೈಕೊಟ್ಟಿತ್ತು. ಉಸಿರಾಟ ಹಾಗೂ ಮೇದೋಜ್ಜೀರಕ ಗ್ರಂಥಿ ತೊಂದರೆಯಿಂದ ಕಳೆದ ವಾರ ಅವರ ದೇಹ ಸ್ಥಿತಿ ಗಂಭೀರಗೊಂಡು ಬ್ರೀಜ್‌ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರದಲ್ಲಿ ಅವರ ಮನೆಯನ್ನೇ ಅಕ್ಷರಶಃ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿ ಎನ್ನದೇ ಕರ್ತವ್ಯ ನಿರತರಾಗಿದ್ದರು.
ಬುಧವಾರ ರಾತ್ರಿಯಿಂದ ಠಾಕ್ರೆ ಅವರಿಗೆ ಜೀವ ರಕ್ಷಕ ಸಾಧನ ಅಳವಡಿಸಲಾಗುತ್ತು. ತುಸು ಚೇತರಿಕೆ ಕಂಡು ಬಂದಿದ್ದ ಕಾರಣ ನಂತರ ಅದನ್ನು ತೆಗೆದು ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶನಿವಾರ ಬೆಳಿಗ್ಗೆಯಿಂದ `ಮಾತೋಶ್ರೀ~ ಹೊರಗೆ ಅಪಾರ ಸಂಖ್ಯೆಯಲ್ಲಿ ಶಿವಸೇನೆಯ ಕಾರ್ಯಕರ್ತರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸೇರಿದ್ದರು. ಸಂಜೆ 4 ಗಂಟೆ ಹೊತ್ತಿಗೆ ಸೇನೆ ಹಾಗೂ ಬಿಜೆಪಿ ಹಿರಿಯ ಮುಖಂಡರು ಆಗಮಿಸಿದರು. ಏಕಾಏಕಿ ಪೊಲೀಸರು ಕಟ್ಟೆಚ್ಚರ ವಹಿಸಿದರು. ಸೇನಾ ಕಾರ್ಯಕರ್ತರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ, ಠಾಕ್ರೆ ಮೃತಪಟ್ಟಿರಬಹುದು ಎಂಬ ಅನುಮಾನ ಆಗ ದಟ್ಟವಾಯಿತು.
ಸಂಜೆ 5 ಗಂಟಗೆ ಡಾ. ಪಾರ್ಕರ್ ಅವರೊಂದಿಗೆ ಹೊರ ಬಂದ ಶಿವಸೇನೆಯ ಮುಖಂಡರಾದ ಸಂಜತ್ ರಾವತ್ ಹಾಗೂ ದಿವಾಕರ್ `ಬಾಳಾ ಸಾಹೇಬರು ಇನ್ನಿಲ್ಲ~ ಎಂದು ಗದ್ಗದಿತರಾಗಿ ಹೇಳಿಕೆ ನೀಡಿದರು. ತಕ್ಷಣವೇ ಅಭಿಮಾನಿಗಳು ಭಾವಾವೇಶದಿಂದ `ಬಾಳ ಠಾಕ್ರೆ ಅಮರ್ ರಹೇ~ ಎಂದು ಘೋಷಣೆ ಕೂಗಲಾರಂಭಿಸಿದರು.
ಕೆಲವರಂತೂ ಈ ಸುದ್ದಿಯನ್ನು ಅರಗಿಸಿಕೊಳ್ಳಲಾಗದೇ ಕುಸಿದು ಬಿದ್ದರು. ಮನೆಯೊಳಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ತಡೆಯಲು ಪೊಲೀಸರು ಹರಸಾಹಸ ಮಾಡಬೇಕಾಯಿತು. ಠಾಕ್ರೆ ನಿಧನದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಶಾಂತಿ ಕಾಪಾಡುವಂತೆ ಪುತ್ರ ಉದ್ಧವ್ ಹಾಗೂ ವಕ್ತಾರ ಸಂಜಯ್ ರಾವುತ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಂತಾಪ: ಶಿವಸೇನೆ ನಾಯಕನ ನಿಧನಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಔತಣ ರದ್ದು: ಬಿಜೆಪಿ ಪ್ರಮುಖರಿಗೆ ಶನಿವಾರ ರಾತ್ರಿ ಏರ್ಪಡಿಸಿದ್ದ ಔತಣ ಕೂಟವನ್ನು ಠಾಕ್ರೆ ನಿಧನದ ಹಿನ್ನೆಲೆಯಲ್ಲಿ ಪ್ರಧಾನಿ ರದ್ದುಪಡಿಸಿದರು.
ಶಿವಾಜಿ ಪಾರ್ಕ್‌ನಲ್ಲಿ ಅಂತಿಮ ದರ್ಶನ
ಠಾಕ್ರೆ ಪಾರ್ಥಿವ ಶರೀರವನ್ನು ಶಿವಾಜಿ ಪಾರ್ಕ್‌ನಲ್ಲಿ ಭಾನುವಾರ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ.
`ಅಭಿಮಾನಿಗಳು ಬೆಳಿಗ್ಗೆ 7 ಗಂಟೆಯಿಂದ ನಾಯಕನಿಗೆ ಅಂತಿಮ ನಮನ ಸಲ್ಲಿಸಬಹುದು~ ಎಂದು ಸಂಜಯ್ ರಾವುತ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.