ADVERTISEMENT

ಡಾನ್ಸ್ ಬಾರ್‌ಗೆ ಅವಕಾಶ

ಸುಪ್ರೀಂಕೋರ್ಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 19:59 IST
Last Updated 16 ಜುಲೈ 2013, 19:59 IST

ನವದೆಹಲಿ (ಪಿಟಿಐ): ಡಾನ್ಸ್ ಬಾರ್ ನಿಷೇಧಿಸಿ ಮಹಾರಾಷ್ಟ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಮಂಗಳವಾರ ತಳ್ಳಿಹಾಕಿದೆ. ಈ ಮೂಲಕ, ರಾಜ್ಯದಲ್ಲಿ ಏಳು ವರ್ಷಗಳ ಬಳಿಕ ಡಾನ್ಸ್ ಬಾರ್‌ಗಳು ಮತ್ತೆ ಕಾರ್ಯಾರಂಭ ಮಾಡಲು ಅವಕಾಶ ದೊರಕಿದಂತಾಗಿದೆ.

ಆದರೆ, ತೀರ್ಪಿನ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಸಮಿತಿ ರಚಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದ್ದು, ಸಮಿತಿಯ ಶಿಫಾರಸು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿದೆ.

ಮಹಾರಾಷ್ಟ್ರ ಸರ್ಕಾರ 2005ರಲ್ಲಿ `ಬಾಂಬೆ ಪೊಲೀಸ್ ಕಾಯ್ದೆ'ಗೆ ತಿದ್ದುಪಡಿ ತಂದು, ಡಾನ್ಸ್ ಬಾರ್‌ಗಳನ್ನು ನಿಷೇಧಿಸಿತ್ತು. ಇದನ್ನು ಪ್ರಶ್ನಿಸಿ ಬಾರ್ ಮತ್ತು ರೆಸ್ಟೊರೆಂಟ್ ಮಾಲೀಕರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ರಾಜ್ಯ ಸರ್ಕಾರದ ಆದೇಶವನ್ನು ಸಂವಿಧಾನಬಾಹಿರ ಎಂದು ಹೈಕೋರ್ಟ್ 2006ರಲ್ಲಿ ತಳ್ಳಿ ಹಾಕಿದಾಗ, ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಆಗ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತ್ತು.

ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಹಾಗೂ ನ್ಯಾಯಮೂರ್ತಿ ಎಸ್.ಎಸ್.ನಿಜ್ಜರ್ ಅವರನ್ನು ಒಳಗೊಂಡ ನ್ಯಾಯಪೀಠ, ಈ ಮೊದಲು ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿ ರಾಜ್ಯ ಸರ್ಕಾರದ ಆದೇಶ ವಜಾ ಮಾಡಿದೆ.

`ಬೀರ್ ಬಾರ್' ಹೆಸರಿನ ಅಡಿಯಲ್ಲಿ ವೇಶ್ಯಾವಾಟಿಕೆ ಜಾಲ ವ್ಯಾಪಕವಾಗಿ ನಡೆಯುತ್ತಿದೆ. ಅಶ್ಲೀಲ ನೃತ್ಯ ಪ್ರದರ್ಶನಗಳು ಡಾನ್ಸ್ ಬಾರ್‌ನಲ್ಲಿ ನಡೆಯುತ್ತಿದ್ದು ಸಮಾಜದ ಸ್ವಾಸ್ಥ್ಯ ಕದಡುವಂತೆ ಮಾಡುತ್ತಿವೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ರಾಜ್ಯ ಸರ್ಕಾರ ಆತಂಕ ವ್ಯಕ್ತಪಡಿಸಿತ್ತು.

ಮಹಾರಾಷ್ಟ್ರದಲ್ಲಿ 345 ಡಾನ್ಸ್ ಬಾರ್‌ಗಳಿಗೆ ಪರವಾನಗಿ ಕೊಡಲಾಗಿದ್ದರೂ ಅನಧಿಕೃತವಾಗಿ 2,500 ಬಾರ್‌ಗಳು ವಹಿವಾಟು ನಡೆಸುತ್ತಿವೆ ಎಂದೂ ಪ್ರತಿಪಾದಿಸಿತ್ತು.

ಇನ್ನೊಂದೆಡೆ, ಡಾನ್ಸ್ ಬಾರ್, ರೆಸ್ಟೊರೆಂಟ್‌ನ ಪ್ರತಿನಿಧಿಗಳು ಹಾಗೂ ಬಾರ್ ಗರ್ಲ್ಸ್‌ಗಳು, ಸಾರ್ವಜನಿಕರ ಮನೋರಂಜನೆಯ ಉದ್ದೇಶ ಹೊಂದಿದ ನೃತ್ಯ ಪ್ರದರ್ಶನಕ್ಕೆ ಅವಕಾಶ ನಿಷೇಧಿಸುವುದು ಸಂವಿಧಾನಬಾಹಿರ ಎಂದು ವಾದಿಸಿದ್ದರು.

ಡಾನ್ಸ್ ಬಾರ್‌ಗಳಲ್ಲಿ 70,000ಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಡಾನ್ಸ್ ಬಾರ್ ನಿಷೇಧಿಸಿದ ಬಳಿಕ ಪರ್ಯಾಯ ಉದ್ಯೋಗ ಸಿಗದೇ, ಹಣಕಾಸಿನ ಮುಗ್ಗಟ್ಟಿನಿಂದ ಅನೇಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಘಟನೆಗಳು ಹೇಳಿದ್ದವು.  ಬಾರ್ ಗರ್ಲ್ಸ್‌ಗಳ ಪೈಕಿ ಶೇ 72ರಷ್ಟು ಮಂದಿ ವಿವಾಹಿತೆಯರಾಗಿದ್ದು, ಇವರಲ್ಲಿ ಶೇ 68ರಷ್ಟು ಮಹಿಳೆಯರು ಕುಟುಂಬ ಪಾಲನೆಯ ಪ್ರಮುಖ ಆದಾಯ ಮೂಲವಾಗಿದ್ದಾರೆ. ಡಾನ್ಸ್ ಬಾರ್ ನಿಷೇಧಿಸಿರುವ ರಾಜ್ಯ ಸರ್ಕಾರದ ನಿರ್ಧಾರದಿಂದ ಇವರೆಲ್ಲ ಉದ್ಯೋಗವಿಲ್ಲದೇ ಬೀದಿಗೆ ಬೀಳುವಂತಾಗಿದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿದ್ದವು.

ತಾರತಮ್ಯದ ದೂರು: ಸಣ್ಣ ಡಾನ್ಸ್ ಬಾರ್‌ಗಳಲ್ಲಿ ನೃತ್ಯ ಪ್ರದರ್ಶನ ನಿಷೇಧಿಸಿದ ಸರ್ಕಾರ, ಶ್ರೀಮಂತರು ಹಾಗೂ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುವ ಕಾರ್ಯಕ್ರಗಳಲ್ಲಿ ನಡೆಯುವ ಪ್ರದರ್ಶನಕ್ಕೆ ಅವಕಾಶ ನೀಡುವ ಸರ್ಕಾರದ ನೀತಿ ತಾರತಮ್ಯದಿಂದ ಕೂಡಿದೆ ಎಂದೂ ಸಂಘಟನೆಗಳ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

ಕಾನೂನು ತಜ್ಞರ ಸಮಿತಿ ರಚನೆ
ಮುಂಬೈ (ಪಿಟಿಐ
): ಡಾನ್ಸ್ ಬಾರ್ ನಿಷೇಧಿಸಿದ ತನ್ನ ನಿರ್ಧಾರವನ್ನು ಸುಪ್ರೀಂಕೋರ್ಟ್ ವಜಾ ಮಾಡಿದ ಹಿನ್ನೆಲೆಯಲ್ಲಿ, ಕಾನೂನು ತಜ್ಞರ ಸಮಿತಿಯೊಂದನ್ನು ರಚಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

`ಸುಪ್ರೀಂಕೋರ್ಟ್ ನೀಡಿದ ಆದೇಶದ ಪ್ರತಿ ನಮಗಿನ್ನೂ ಸಿಕ್ಕಿಲ್ಲ. ವಕೀಲರು, ಕಾನೂನು ತಜ್ಞರು ಹಾಗೂ ಶಾಸಕರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುತ್ತಿದ್ದು, ಕೋರ್ಟ್‌ನ ತೀರ್ಪನ್ನು ಸಮಿತಿಯು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡಲಿದೆ' ಎಂದು ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್.ಪಾಟೀಲ ತಿಳಿಸಿದ್ದಾರೆ.

ವಿಭಿನ್ನ ಪ್ರತಿಕ್ರಿಯೆ: ಈ ಮಧ್ಯೆ, ಹಲವು ರಾಜಕೀಯ ಪಕ್ಷಗಳು ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ವಿಭಿನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿವೆ.
`ಡಾನ್ಸ್ ಬಾರ್‌ಗಳನ್ನು ನಿಷೇಧಿಸಲು ಕಠಿಣ ಕಾನೂನು ಅಗತ್ಯವಿದೆ' ಎಂದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಾಣಿಕರಾವ್ ಠಾಕರೆ ಹೇಳಿದ್ದರೆ, ರಾಜ್ಯದ ಜನತೆ ಡಾನ್ಸ್ ಬಾರ್ ನಿಷೇಧವನ್ನು ಬೆಂಬಲಿಸಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಭಾಸ್ಕರ್ ಜಾಧವ್ ಅಭಿಪ್ರಾಯಪಟ್ಟಿದ್ದಾರೆ.

ಸಮಾಜವಾದಿ ಪಕ್ಷದ ಮುಖಂಡ ಅಬು ಅಜ್ಮಿ, ನ್ಯಾಯಾಲಯದಲ್ಲಿ ವಿಚಾರಣೆಗೆ ಅಗತ್ಯವಾಗಿದ್ದ `ಹೋಮ್ ವರ್ಕ್' ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

ಸುಪ್ರೀಂಕೋರ್ಟ್ ಆದೇಶ `ದುರದೃಷ್ಟಕರ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೇವೇಂದ್ರ ಫಡ್ನವಿಸ್ ವ್ಯಾಖ್ಯಾನಿಸಿದ್ದು, ಮಹಾರಾಷ್ಟ್ರ ಸರ್ಕಾರ ಈ ವಿಷಯದ ಬಗ್ಗೆ ಗಂಭೀರ ಕಾಳಜಿ ವಹಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿವಸೇನೆ ನಾಯಕ ನೀಲಮ್ ಗೊರ್ಹೆ, `ಡಾನ್ಸ್ ಬಾರ್ ಅಗತ್ಯವಿಲ್ಲ; ಇಂಥ ಬಾರ್‌ಗಳಲ್ಲಿ ಮಹಿಳೆಯರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.