ADVERTISEMENT

ಡಾ.ಬಿ.ಆರ್‌.ಅಂಬೇಡ್ಕರ್ ಇನ್ನುಮುಂದೆ ರಾಮ್‌ಜೀ ಅಂಬೇಡ್ಕರ್‌ : ಸಿ.ಎಂ. ಯೋಗಿ ಆದಿತ್ಯನಾಥ

ಏಜೆನ್ಸೀಸ್
Published 29 ಮಾರ್ಚ್ 2018, 18:40 IST
Last Updated 29 ಮಾರ್ಚ್ 2018, 18:40 IST
ಚಿತ್ರಕೃಪೆ : ದಿ ಏಷಿಯನ್‌ ಏಜ್‌
ಚಿತ್ರಕೃಪೆ : ದಿ ಏಷಿಯನ್‌ ಏಜ್‌   

ಲಖನೌ: ಡಾ.ಬಿ.ಆರ್.ಅಂಬೇಡ್ಕರ್‌ ಹೆಸರನ್ನು ಇನ್ನು ಮುಂದೆ ‘ಡಾ.ಭೀಮ್‌ರಾವ್‌ ರಾಮ್‌ಜೀ ಅಂಬೇಡ್ಕರ್‌’ ಎಂದು ಬಳಸುವಂತೆ ಉತ್ತರ ಪ್ರದೇಶದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

‘ರಾಜ್ಯ ಸರ್ಕಾರದ ಎಲ್ಲ ದಾಖಲೆಗಳಲ್ಲಿ ಇನ್ನು ಮುಂದೆ ಪರಿಸ್ಕೃತ ಹೆಸರನ್ನೆ ಬಳಸುವಂತೆ ಸಾರ್ವಜನಿಕ ಆಡಳಿತದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್‌ ಅವರು ಮಂಗಳವಾರ ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆಯ ಪ್ರತಿಗಳು ಅಲಹಾಬಾದ್ ಮತ್ತು ಲಖನೌದಲ್ಲಿನ ಹೈಕೋರ್ಟ್‌ ಪೀಠದ ರೆಜಿಸ್ಟ್ರಾರ್‌ ಕಚೇರಿಗಳಿಗೂ ತಲುಪಿಸಲಾಗಿದೆ.

‘ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿಯೇ ಅಂಬೇಡ್ಕರ್‌ ತಮ್ಮ ಹೆಸರನ್ನು ಡಾ.ಭೀಮ್‌ರಾವ್‌ ರಾಮ್‌ಜೀ ಆಂಬೇಡ್ಕರ್‌’ ಎಂದು ಉಲ್ಲೇಖಿಸಿದ್ದಾರೆಂದು ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ADVERTISEMENT

ಅಂಬೇಡ್ಕರ್‌ ಅವರ ಹೆಸರು ಬದಲಾವಣೆ ಮಾಡುವಂತೆ ಉತ್ತರ ಪ್ರದೇಶದ ರಾಜ್ಯಪಾಲ ರಾಮ್‌ ನಾಯಕ್‌ ಸಹ ಧ್ವನಿಗೂಡಿಸಿದ್ದರು. ರಾಷ್ಟ್ರಪತಿ ರಾಮನಾಥ ಕೊವಿಂದ್‌ರೊಂದಿಗೂ ಆ ಕುರಿತು ಕಳೆದ ವರ್ಷ ಡಿಸೆಂಬರ್‌ನಲ್ಲಿ ಚರ್ಚಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಹ ತಮ್ಮ ಇತ್ತೀಚಿನ ‘ಮನ್‌ ಕೀ ಬಾತ್‌’ ಕಾರ್ಯಕ್ರಮದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಕೊಂಡಾಡಿದ್ದರು. ‘ಅಂಬೇಡ್ಕರ್‌ ಆದರ್ಶ ಪಾಲಿಸಿ ಯಶಸ್ಸು ಗಳಿಸಿದ್ದಕ್ಕೆ ನಾನೇ ಉದಾಹರಣೆ’ ಎಂದು ಹೇಳಿದ್ದರು.

ಉತ್ತರ ಪ್ರದೇಶ ಸರ್ಕಾರದ ಈ ಹೆಸರು ಬದಲಾವಣೆ ನಿರ್ಧಾರಕ್ಕೆ ದೆಹಲಿ ವಾಯವ್ಯ ಕ್ಷೇತ್ರದ ಬಿಜೆಪಿ ಸಂಸದ ಉದಿತ್‌ ರಾಜ್‌  ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಇದೊಂದು ವಿನಾಕಾರಣ ವಿವಾದ ಹುಟ್ಟುಹಾಕುವ ನಿರ್ಧಾರವೆಂದು’ ಟೀಕಿಸಿದ್ದಾರೆ.

2019ರ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ಇರಿಸಿಕೊಂಡು ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಅವರು ‘ದಲಿತರ ಆದರ್ಶಪ್ರಾಯ ಮಹನೀಯರ ಹೆಸರಲ್ಲಿ ರಾಮ್‌ಜೀ ಪದ ಸೇರಿಸುವ ನಿರ್ಧಾರ ತಳೆದಿದ್ದಾರೆ’ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.