ADVERTISEMENT

ಡಿಆರ್‌ಡಿಒ ಸೊಳ್ಳೆ ನಿವಾರಕ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 16:40 IST
Last Updated 14 ಫೆಬ್ರುವರಿ 2011, 16:40 IST

ನವದೆಹಲಿ (ಐಎಎನ್‌ಎಸ್): ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯು (ಡಿಆರ್‌ಡಿಒ) ಗುಡ್ಡಗಾಡು ಪ್ರದೇಶಗಳಲ್ಲಿ, ಗಡಿ ಭಾಗಗಳಲ್ಲಿ ಕಾರ್ಯಾಚರಣೆ ನಡೆಸುವ ಸೈನಿಕರಿಗಾಗಿ ಅಭಿವೃದ್ಧಿಪಡಿಸಿದ ಸೊಳ್ಳೆ ನಿವಾರಕ ವಾಣಿಜ್ಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಮೂಲಕ ಸೈನಿಕರ ಬಳಕೆಯ ವಸ್ತುಗಳು ಜನಸಾಮಾನ್ಯರಿಗೂ ಸಿಗುವುದು ಸಾಧ್ಯವಾಗಿದೆ.

ಡಿಆರ್‌ಡಿಒ ಮತ್ತು ಜ್ಯೋತಿ ಲ್ಯಾಬೊರೇಟರೀಸ್ ಲಿಮಿಟೆಡ್ ಜಂಟಿ ಸಹಯೋಗದಲ್ಲಿ ಈ ಸೇನಾ ಉತ್ಪನ್ನವನ್ನು ಸೋಮವಾರ ಇಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಡಿಆರ್‌ಡಿಒದ ಗ್ವಾಲಿಯರ್ ಮೂಲದ ಪ್ರಯೋಗಾಲಯ ಡಿಆರ್‌ಡಿಇನಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಕಳೆದ ಆರು ವರ್ಷಗಳಿಂದ ಸೈನಿಕರು ಇದನ್ನು ಬಳಸುತ್ತಿದ್ದಾರೆ.

ಡಯಾಥಿಲ್ ಫಿನಾಯಿಲ್ ಅಸೆಟಾಮೈಡ್‌ಗಳನ್ನು (ಡೆಪಾ) ಬಳಸಿಕೊಂಡು ಮನೆಯ ಹೊರಭಾಗದಲ್ಲಿ ಸಿಂಪಡಿಸಿ ಸೊಳ್ಳೆಗಳನ್ನು ದೂರ ಇರಿಸುವ ರೀತಿಯಲ್ಲಿ ಮೂಲತಃ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ಮೈ ಮೇಲೆ ಕ್ರೀಂ ರೀತಿಯಲ್ಲಿ ಹಚ್ಚಿಕೊಂಡು ಸೊಳ್ಳೆಗಳನ್ನು ದೂರ ಇರಿಸುವ ರೀತಿಯಲ್ಲೂ ಇದನ್ನು ಸುಧಾರಿಸಲಾಗಿದೆ. ವೆಟ್ ವೈಪ್, ಮ್ಯಾಕ್ಸೊ ಸೇಫ್, ಸಾಫ್ಟ್, ಮ್ಯಾಕ್ಸೊ ಮಿಲಿಟರಿ ಹೀಗೆ ನಾಲ್ಕು ಬಗೆಯಲ್ಲಿ ಇವು ಲಭ್ಯವಾಗಲಿವೆ. ಒಂದು ಸಲ ಹಚ್ಚಿಕೊಂಡರೆ ಕನಿಷ್ಠ 6 ಗಂಟೆ ಸೊಳ್ಳೆ ಹತ್ತಿರಕ್ಕೆ ಸುಳಿಯುವುದಿಲ್ಲ. ಇದು 20 ವರ್ಷಗಳ ಸಂಶೋಧನೆಯ ಫಲ ಎಂದು ಡಿಆರ್‌ಡಿಒನ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯ ನಿಯಂತ್ರಕ ಸಿ. ಕೆ. ಪ್ರಹ್ಲಾದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.