ADVERTISEMENT

ಡಿಎಸ್‌ಪಿ ಹತ್ಯೆ: ರಾಜಾ ಭಯ್ಯಾ ನಿರ್ದೋಷಿ- ಸಿಬಿಐ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ಲಖನೌ (ಪಿಟಿಐ):  ಡಿಎಸ್‌ಪಿ ಜಿಯಾ-ಉಲ್-ಹಕ್ ಹತ್ಯೆಗೆ ಸಂಬಂಧಿಸಿದಂತೆ ಗುರುವಾರ ವಿಶೇಷ ನ್ಯಾಯಾಲಯದಲ್ಲಿ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿರುವ ಸಿಬಿಐ, ಉತ್ತರ ಪ್ರದೇಶದ ಮಾಜಿ ಸಚಿವ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ ಅವರನ್ನು `ನಿರ್ದೋಷಿ' ಎಂದು ತಿಳಿಸಿದೆ.

ತನ್ನ ಪತಿಯ ಹತ್ಯೆಯಲ್ಲಿ ರಾಜಾ ಭಯ್ಯಾ ಸಂಚು ನಡೆಸಿರುವುದಾಗಿ ಆರೋಪಿಸಿ ಹಕ್ ಅವರ ಪತ್ನಿ ಪರ್ವೀನ್ ಆಜಾದ್ ದಾಖಲಿಸಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ `ತಾಂತ್ರಿಕ'ವಾಗಿ ತನಿಖೆ ಪೂರ್ಣಗೊಳಿಸಿದ ವರದಿಯನ್ನು ಸಹ ಸಿಬಿಐ ಸಲ್ಲಿಸಿದೆ. ಘಟನೆ ನಂತರ ರಾಜ್ಯದ ಪೊಲೀಸರು ದಾಖಲಿಸಿರುವ ಪ್ರಕರಣದೊಂದಿಗೆ ತನ್ನ ತನಿಖಾ ವರದಿಯನ್ನೂ ಸೇರಿಸುವಂತೆ ಸಿಬಿಐ ಕೋರಿದೆ.

ರಾಜಾ ಭಯ್ಯಾ ತಮ್ಮ ಪ್ರಭಾವ ಬಳಸಿ ಸ್ಥಳೀಯ ಗ್ರಾಮಸ್ಥರಿಗೆ ಪ್ರತಾಪ್‌ಗಡ ಜಿಲ್ಲಾಡಳಿತದಿಂದ ಹಲವು ಶಸ್ತ್ರಾಸ್ತ್ರ ಪರವಾನಗಿಗಳನ್ನು ಕೊಡಿಸಿದ್ದು, ಇದರ ನೆರವಿನಿಂದ ಅಕ್ರಮ ಚಟುವಟಿಕೆಗಳು ನಡೆದಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದೆ. ಆದರೆ ಇವು ತನ್ನ ತನಿಖಾ ವ್ಯಾಪ್ತಿಗೆ ಬಾರದ ಕಾರಣ, ಇನ್ನಷ್ಟು ತನಿಖೆ ನಡೆಸಿ, ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ ಎಂದು  ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.