ADVERTISEMENT

ಡಿ.ಸಿ ಬಿಡುಗಡೆಗೆ ಷರತ್ತು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 19:30 IST
Last Updated 22 ಏಪ್ರಿಲ್ 2012, 19:30 IST

ರಾಯ್‌ಪುರ (ಪಿಟಿಐ): ಸುಕ್ಮಾ ಜಿಲ್ಲೆಯ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರ ಬಿಡುಗಡೆಗೆ ನಕ್ಸಲರು ಎರಡು ಪ್ರಮುಖ ಬೇಡಿಕೆಗಳನ್ನು ಭಾನುವಾರ ಸರ್ಕಾರದ ಮುಂದೆ ಇರಿಸಿದ್ದಾರೆ. ಜೈಲಿನಲ್ಲಿರುವ ತಮ್ಮ ಎಂಟು ಸಹಚರರನ್ನು ಏ. 25ರೊಳಗೆ ಬಿಡಬೇಕು ಮತ್ತು `ಗ್ರೀನ್ ಹಂಟ್~ ಕಾರ್ಯಾಚರಣೆ ನಿಲ್ಲಿಸುವಂತೆ  ಷರತ್ತು ಹಾಕಿದ್ದಾರೆ.

ಜೊತೆಗೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿರುವವರನ್ನೂ ಬಿಡುಗಡೆ ಮಾಡಬೇಕು ಎಂಬುದು ನಕ್ಸಲರ ಒತ್ತಾಯವಾಗಿದೆ.

ನಕ್ಸಲರು ತಮ್ಮ ಬೇಡಿಕೆಯ ಧ್ವನಿ ಮುದ್ರಿಕೆಯನ್ನು ಕೆಲವು ಪತ್ರಕರ್ತರಿಗೆ ನೀಡಿದ್ದಾರೆ ಎಂದು ತಿಳಿಸಿರುವ ಛತ್ತೀಸ್‌ಗಡ ಪೊಲೀಸರು, ಮೆನನ್ ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ.

ನಕ್ಸಲರು ಬಿಡುಗಡೆ ಮಾಡಲು ಹೇಳಿರುವ ತಮ್ಮ ಸಹಚರರ ಪಟ್ಟಿ ಇಂತಿದೆ -ಮರ‌್ಕಂ ಗೋಪಣ್ಣ ಅಲಿಯಾಸ್ ಸತ್ಯಂ ರೆಡ್ಡಿ, ನಿರ್ಮಾಲಾ ಅಕ್ಕ ಅಲಿಯಾಸ್ ವಿಜಯಲಕ್ಷ್ಮೀ, ದೇವಪಾಲ್ ಚಂದ್ರಶೇಖರ್ ರೆಡ್ಡಿ, ಶಾಂತಿಪ್ರಿಯ ರೆಡ್ಡಿ, ಮೀನಾ ಚೌಧರಿ, ಕೊರ‌್ಸಾ ಸನ್ನಿ, ಮರ‌್ಕಂ ಸನ್ನಿ ಮತ್ತು ಅಸಿತ್ ಕುಮಾರ್ ಸೆನ್.

ಏ. 25ರೊಳಗೆ ತಮ್ಮ ಬೇಡಿಕೆ ಈಡೇರಿದರೆ ತದನಂತರ ಒತ್ತೆಯಾಳಾಗಿರುವ ಜಿಲ್ಲಾಧಿಕಾರಿ ಬಿಡುಗಡೆ ಕುರಿತ ನಿರ್ಧಾರವನ್ನು ಜನರ ನ್ಯಾಯಾಲಯ (ಜನ್ ಅದಾಲತ್)ನಲ್ಲಿ ಕೈಗೊಳ್ಳುವುದಾಗಿ ನಕ್ಸಲರು ತಿಳಿಸಿದ್ದಾರೆ ಎಂದು ನಕ್ಸಲ್ ನಿಗ್ರಹ ಪಡೆಯ ಮುಖ್ಯಸ್ಥರೂ ಆದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಮ್ ನಿವಾಸ್ ತಿಳಿಸಿದ್ದಾರೆ.

ನಕ್ಸಲರು ಸರ್ಕಾರವನ್ನು ನೇರವಾಗಿ ಸಂಪರ್ಕಿಸಿಲ್ಲ ಮತ್ತು ಮಾಧ್ಯಮದವರ ಮೂಲಕ ದೊರಕಿರುವ ಧ್ವನಿ ಮುದ್ರಿಕೆಯು ನಕ್ಸಲರ ಮೂಲಕವೇ ಬಂದಿದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕಿದೆ. ಜೊತೆಗೆ ಜಿಲ್ಲಾಧಿಕಾರಿಗಳನ್ನು ಅಪಹರಿಸುವ ಗುಂಪು ಯಾವುದು ಎನ್ನುವುದು ಇನ್ನೂ ತಿಳಿದಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ, ಮೆನನ್ ಅವರ ಬಿಡುಗಡೆಗಾಗಿ ನಕ್ಸಲರೊಂದಿಗೆ ಸಂಧಾನ ನಡೆಸುವ ಇಂಗಿತವನ್ನು ಸ್ವಾಮಿ ಅಗ್ನಿವೇಶ್ ವ್ಯಕ್ತಪಡಿಸಿ ಸುದ್ದಿಸಂಸ್ಥೆಗೆ ವ್ಯಕ್ತಪಡಿಸಿದ್ದರು.

ಪತ್ನಿ, ತಂದೆ ಮೊರೆ
ಅಲೆಕ್ಸ್ ಪಾಲ್ ಮೆನನ್ ಅವರನ್ನು ಕೆಲವು ತಿಂಗಳ ಹಿಂದೆಯಷ್ಟೆ ವಿವಾಹವಾಗಿರುವ  ಆಶಾ ಮೆನನ್ ತಮ್ಮ ಪತಿಯನ್ನು ಬಿಡುಗಡೆ ಮಾಡುವಮತೆ ನಕ್ಸಲರನ್ನು ಕೋರಿದ್ದಾರೆ.

`ಅವರು (ಅಲೆಕ್ಸ್ ಪಾಲ್) ಆಸ್ತಮಾದಿಂದ ಬಳಲುತ್ತಿದ್ದಾರೆ. ಔಷಧ ತೆಗೆದುಕೊಳ್ಳದಿದ್ದರೆ ಅವರ ಆರೋಗ್ಯ ಹದಗೆಡುತ್ತದೆ. ಯಾತನೆಯನ್ನು ಅವರು ತಾಳಲಾರರು. ಜನರ ಸಂಕಷ್ಟಕ್ಕೆ ಆಗುವ ಮಾನವೀಯ ಗುಣ ಅವರದ್ದು. ಆದ್ದರಿಂದ ಅವರನ್ನು ಬಿಟ್ಟುಬಿಡಿ~ ಎಂದು ಆಶಾ ಅಂಗಲಾಚಿದ್ದಾರೆ. ಅಲೆಕ್ಸ್ ಮಾವೊವಾದಿಗಳ ಶತ್ರುವಲ್ಲ, ಆತನನ್ನು ಬಿಟ್ಟುಬಿಡಿ ಎಂದು ಅವರ ತಂದೆ ವರದಾಸ್ ನಕ್ಸಲರಿಗೆ ಚೆನ್ನೈನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬಿಹಾರದಲ್ಲಿ ಕಟ್ಟೆಚ್ಚರ

ಛತ್ತೀಸ್‌ಗಡ ಮತ್ತು ಒಡಿಶಾದಲ್ಲಿ ಮಾವೊವಾದಿಗಳ ಚಟುವಟಿಕೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬಿಹಾರದ ನಕ್ಸಲ್ ಪೀಡಿತ 33 ಜಿಲ್ಲೆಗಳಲ್ಲಿ ಕಟ್ಟೆಚ್ಚರದಿಂದ ಇರುವಂತೆ ಪೊಲೀಸರಿಗೆ ಸರ್ಕಾರ ಸೂಚಿಸಿದೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT