ADVERTISEMENT

ಡೀಮ್ಡ್ ವಿಶ್ವವಿದ್ಯಾಲಯಗಳ ಪರಿಶೀಲನೆಗೆ ಸಮಿತಿ ರಚನೆ

ಪಿಟಿಐ
Published 5 ಡಿಸೆಂಬರ್ 2017, 19:30 IST
Last Updated 5 ಡಿಸೆಂಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಡೀಮ್ಡ್ ವಿಶ್ವವಿದ್ಯಾಲಯಗಳ ಕಾರ್ಯವಿಧಾನ ಅಧ್ಯಯನ ಮಾಡಲು ಹಾಗೂ ಅವುಗಳ ನಿಯಂತ್ರಣಕ್ಕೆ ಸಲಹೆ ನೀಡಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು (ಎಚ್‌ಆರ್‌ಡಿ) ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ.

ನಾಲ್ಕು ಡೀಮ್ಡ್ ವಿಶ್ವವಿದ್ಯಾಲಯಗಳು ನೀಡಿದ ಎಂಜಿನಿಯರಿಂಗ್ ಪದವಿಗಳನ್ನು ಅಮಾನತು ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ. ಈ ವಿಶ್ವವಿದ್ಯಾಲಯಗಳು ಅಗತ್ಯ ಅನುಮೋದನೆ ಪಡೆಯದೆ ತಾಂತ್ರಿಕ ವಿಷಯಗಳಲ್ಲಿ ದೂರಸಂಪರ್ಕ ಶಿಕ್ಷಣ ಸೌಲಭ್ಯ ನೀಡುತ್ತಿದ್ದವು.

ಸುಪ್ರೀಂ ಕೋರ್ಟ್‌ನ ನಿಲುವಿನಿಂದಾಗಿ ಈಗ 30,000 ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಯಲ್ಲಿದೆ.  ಪಟ್ನಾ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಲ್. ನರಸಿಂಹನ್ ರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಎಚ್‌ಆರ್‌ಡಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸುಖ್‌ಬೀರ್ ಸಿಂಗ್ ಸಂಧು ಹಾಗೂ ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುದ್ಧೆ ಸಮಿತಿಯ ಸದಸ್ಯರು.

ADVERTISEMENT

ಎಐಸಿಟಿಇ ನಿಯಮದ ಪ್ರಕಾರ ದೂರಸಂಪರ್ಕ ಶಿಕ್ಷಣದ ಮೂಲಕ ತಾಂತ್ರಿಕ ಶಿಕ್ಷಣವನ್ನು ನೀಡುವಂತಿಲ್ಲ.ಜೆಆರ್‌ಎನ್ ರಾಜಸ್ಥಾನ ವಿದ್ಯಾಪೀಠ, ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್ ಇನ್ ಎಜುಕೇಶನ್–ರಾಜಸ್ಥಾನ, ಅಲಹಾಬಾದ್ ಅಗ್ರಿಕಲ್ಚರಲ್ ಇನ್‌ಸ್ಟಿಟ್ಯೂಟ್ ಹಾಗೂ ವಿನಾಯಕ ಮಿಶನ್ಸ್ ರಿಸರ್ಚ್ ಫೌಂಡೇಷನ್ ಸಂಸ್ಥೆಗಳು ನೀಡಿದ ಪದವಿಯನ್ನು ವಿಶ್ವವಿದ್ಯಾಲಯ ಅನುದಾನ ಆಯೋಗವು ಕಳೆದ ವಾರ ಅಮಾನತು ಮಾಡಿತ್ತು.

ಅಲ್ಲದೆ, ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಟ್ಯೂಷನ್ ಹಾಗೂ ಇನ್ನಿತರ ಶುಲ್ಕಗಳನ್ನು 2018ರ ಮೇ 31ರ ಒಳಗಾಗಿ ಹಿಂದಿರುಗಿಸಬೇಕು ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.