ADVERTISEMENT

ಡೆಂಗಿ: ರಾಷ್ಟ್ರಾದ್ಯಂತ 18,760 ಪ್ರಕರಣ, ಕೇರಳ ಅತಿ ಹೆಚ್ಚು; ಚಿಕೂನ್‌ ಗುನ್ಯಾ– ಕರ್ನಾಟಕದಲ್ಲಿ 4,047 ಪ್ರಕರಣ

ಮುಂಗಾರು ಮುಂಚಿತ ಪ್ರವೇಶ ಕಾಯಿಲೆ ಉಲ್ಬಣಕ್ಕೆ ಕಾರಣ

ಪಿಟಿಐ
Published 4 ಜುಲೈ 2017, 10:39 IST
Last Updated 4 ಜುಲೈ 2017, 10:39 IST
ಡೆಂಗಿ: ರಾಷ್ಟ್ರಾದ್ಯಂತ 18,760 ಪ್ರಕರಣ, ಕೇರಳ ಅತಿ ಹೆಚ್ಚು; ಚಿಕೂನ್‌ ಗುನ್ಯಾ– ಕರ್ನಾಟಕದಲ್ಲಿ 4,047 ಪ್ರಕರಣ
ಡೆಂಗಿ: ರಾಷ್ಟ್ರಾದ್ಯಂತ 18,760 ಪ್ರಕರಣ, ಕೇರಳ ಅತಿ ಹೆಚ್ಚು; ಚಿಕೂನ್‌ ಗುನ್ಯಾ– ಕರ್ನಾಟಕದಲ್ಲಿ 4,047 ಪ್ರಕರಣ   

ನವದೆಹಲಿ: ಪ್ರಸಕ್ತ ವರ್ಷ ರಾಷ್ಟ್ರಾದ್ಯಂತ 18,760 ಡೆಂಗಿ ಪ್ರಕರಣ ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದ್ದು, ಮುಂಗಾರು ಮುಂಚಿತ ಪ್ರವೇಶದ ಕಾರಣಕ್ಕೆ ಕಾಯಿಲೆ ವೇಗವಾಗಿ ಹರಡಿದ್ದು, ಪ್ರಕರಣಗಳು ಹೆಚ್ಚಾಗಿವೆ ಎಂದಿದೆ.

ಅತಿ ಹೆಚ್ಚು ಕೇರಳದಲ್ಲಿ 9,104 ಮತ್ತು ತಮಿಳುನಾಡಿನಲ್ಲಿ 4,174 ಹಾಗೂ ಕರ್ನಾಟಕದಲ್ಲಿ 1,945 ಪ್ರಕರಣಗಳು ಜುಲೈ 2ರ ವರೆಗೆ ವರದಿಯಾಗಿವೆ. ಕರ್ನಾಟಕದಲ್ಲಿ ಅತಿ ಹೆಚ್ಚು 4,047 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ.

ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಮಂಗಳವಾರ ಈ ಸಂಬಂಧ ಸಭೆ ನಡೆಸಿದ್ದು, ಆರೋಗ್ಯ ಕಾರ್ಯದರ್ಶಿ ಸಿ.ಕೆ. ಮಿಶ್ರಾ, ಐಸಿಎಂಆರ್‌ನ ನಿರ್ದೇಶಕರಾದ ಸೌಮ್ಯಾ ಸ್ವಾಮಿನಾಥನ್‌, ವೆಕ್ಟರ್‌ ಮೂಲಕ ಹರಡುವ ರೋಗಗಳ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮ(ಎನ್‌ವಿಬಿಡಿಸಿಪಿ) ಮತ್ತು ಇತರ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಈ ಸಂಬಂಧ ಎರಡು ಪುನರ್‌ ಅವಲೋಕನ ಚರ್ಚೆಗಳನ್ನು ನಡೆಸಿದ್ದು, ದೆಹಲಿ, ಕೇಂದ್ರಾಡಳಿತ ಪ್ರದೇಶ ಮತ್ತು ಇರತ ರಾಜ್ಯಗಳ ಪೂರ್ವ ತಯಾರಿ ತೃಪ್ತಿಕರವಾಗಿದೆ. ಈಗಾಗಲೇ ಮೂರು ಬಾರಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಈ ವಿಷಯ ಕುರಿತು 13 ಸಲಹೆಗಳನ್ನು ನೀಡಿದ್ದೇವೆ. ಆರೋಗ್ಯ ಕಾರ್ಯದರ್ಶಿಗಳು ಶೀಘ್ರದಲ್ಲಿ ಇತರ ರಾಜ್ಯಗಳ ಜತೆ ವಿಡಿಯೊ ಕಾನ್ಫರೆನ್ಸ್ ನಡೆಸಲಿದ್ದಾರೆ ಎಂದು ನಡ್ಡಾ ಅವರು ಹೇಳಿದರು.

ಮುಂಗಾರು ಮುಂಚಿತವಾಗಿ ಆರಂಭವಾದ ಕಾರಣದಿಂದಾಗಿ ಕೇರಳದಲ್ಲಿ ಡೆಂಗಿ, ಮಲೇರಿಯಾ ಮತ್ತು ಈ ಸಂಬಂಧಿ ಕಾಯಿಕೆಗಳು ಹೆಚ್ಚಾಗಿ ಹರಡುತ್ತಿವೆ ಎಂದು ಆರೋಗ್ಯ ಕಾರ್ಯದರ್ಶಿ ಸಿ.ಕೆ. ಮಿಶ್ರಾ ಅವರು ಹೇಳಿದರು.

‘ನಾವು ಈಗಾಗಲೇ ಅಲ್ಲಿಗೆ ತಂಡವನ್ನು ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಆದರೆ, ಈ ಸಂಬಂಧ ಕೇರಳ ಯಾವುದೇ ಮನವಿ ಮಾಡಿಲ್ಲ’ ಎಂದು ತಿಳಿಸಿದರು.

ಈವರೆಗಿನ ವರದಿಯಾದ ಪ್ರಕರಣಗಳಲ್ಲಿ ಹಲವು ಶಂಕಿತ ಪ್ರಕರಣಗಳೂ ಸೇರಿವೆ. ಆದ್ದರಿಂದ, ಮುಂಗಾರಿನ ಅಂತ್ಯದ ಬಳಿಕ ಅಂತಿಮವಾಗಿ ದೃಢಪಡಿಸಿದ ಪ್ರಕರಣಗಳ ವರದಿ ಲಭ್ಯವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಸ್ತುತ ನಡೆಸಿದ ಸಭೆಯಲ್ಲಿ ಲಭ್ಯವಾಗಿರುವ ಮಾಹಿತಿ ಪ್ರಕಾರ ಜುಲೈ 2ರ ವರೆಗಿನ ವರದಿಯಂತೆ ಕರ್ನಾಟಕದಲ್ಲಿ 1,945, ಗುಜರಾತ್‌ 616, ಆಂಧ್ರಪ್ರದೇಶ 606, ಪಶ್ಚಿಮ ಬಂಗಾಳ 469 ಡೆಂಗಿ ಪ್ರಕರಣಗಳು ವರದಿಯಾಗಿವೆ.

ರಾಷ್ಟ್ರಾದ್ಯಂತ 10,952 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು 4,047 ಪ್ರಕರಣ ವರದಿಯಾಗಿವೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.