ADVERTISEMENT

ತನಿಖೆ ವಿಳಂಬಕ್ಕೆ ಕಾಣದ ಕೈಗಳ ಕೈವಾಡ ಕಾರಣವೇ?

ಪಿಟಿಐ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST
ತನಿಖೆ ವಿಳಂಬಕ್ಕೆ ಕಾಣದ ಕೈಗಳ ಕೈವಾಡ ಕಾರಣವೇ?
ತನಿಖೆ ವಿಳಂಬಕ್ಕೆ ಕಾಣದ ಕೈಗಳ ಕೈವಾಡ ಕಾರಣವೇ?   

ನವದೆಹಲಿ: ಎರಡನೇ ತಲೆಮಾರಿನ (2ಜಿ) ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.) ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ. ತನಿಖೆ ವಿಳಂಬದ ಹಿಂದೆ ಕಾಣದ ಕೈಗಳ ಕೈವಾಡ ಇದೆಯೇ ಎಂದು ಕೋರ್ಟ್‌ ಪ್ರಶ್ನಿಸಿದೆ.

ಏರ್‌ಸೆಲ್‌–ಮ್ಯಾಕ್ಸಿಸ್‌ ಸೇರಿ 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿ ಎಲ್ಲ ಹಗರಣಗಳ ತನಿಖೆಯ ಸ್ಥಿತಿಗತಿ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ ಮತ್ತು ನವೀನ್‌ ಸಿನ್ಹಾ ಅವರ ‍ಪೀಠ ಸೂಚಿಸಿದೆ.

ಇಂತಹ ಪ್ರಕರಣಗಳ ತನಿಖೆ ಕೊನೆಯಾಗುವುದೇ ಇಲ್ಲ ಎಂಬುದು ಆಘಾತಕಾರಿ ವಿಚಾರ. ಬಹಳ ಕಾಲದಿಂದ ತನಿಖೆ ನಡೆಯುತ್ತಲೇ ಇದೆ. ಇಂತಹ ಸೂಕ್ಷ್ಮ ಮತ್ತು ಗಂಭೀರ ಪ್ರಕರಣ ಏನಾಯಿತು ಎಂದು ಜನರಿಗೆ ತಿಳಿಸದೇ ಇರುವುದು ಸರಿಯಲ್ಲ ಎಂದು ಪೀಠ ಹೇಳಿತು.

ADVERTISEMENT

ಒಂದು ಪ್ರಕರಣದಲ್ಲಿ ಆರೋಪಿಯಾಗಿದ್ದ ದೂರಸಂಪರ್ಕ ಖಾತೆಯ ಮಾಜಿ ಸಚಿವ ಎ.ರಾಜಾ ಖುಲಾಸೆಗೊಂಡಿದ್ದಾರೆ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಈ ಸಂದರ್ಭದಲ್ಲಿ ಹೇಳಿದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ, ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ ಅನುಮೋದನೆ ಪ್ರಕರಣಗಳು ಸೇರಿ ಇತರ ಪ್ರಕರಣಗಳು ಏನಾದವು ಎಂದು ಪ್ರಶ್ನಿಸಿತು.

ಏರ್‌ಸೆಲ್‌–ಮ್ಯಾಕ್ಸಿಸ್‌ ಪ್ರಕರಣದ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ಇದೇ ನ್ಯಾಯಾಲಯ ಹಿಂದೆ ಸೂಚಿಸಿತ್ತು. ಆದರೆ ಆ ಸ್ಥಿತಿಗತಿ ವರದಿ ಆರೋಪಿಯೊಬ್ಬರ ಮಲಗುವ ಕೋಣೆ ಸೇರಿಕೊಂಡಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಆರೋಪಿಸಿದರು. ಆದರೆ, ಈ ಆರೋಪಿ ಯಾರು ಎಂದು ಅವರು ಹೆಸರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.