ADVERTISEMENT

ತಪ್ಪಿತಸ್ಥ ಪೊಲೀಸರ ವಿರುದ್ಧ ಕೈಗೊಂಡ ಕ್ರಮ ಏನು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 19:30 IST
Last Updated 23 ಅಕ್ಟೋಬರ್ 2017, 19:30 IST
ತಪ್ಪಿತಸ್ಥ ಪೊಲೀಸರ ವಿರುದ್ಧ ಕೈಗೊಂಡ ಕ್ರಮ ಏನು
ತಪ್ಪಿತಸ್ಥ ಪೊಲೀಸರ ವಿರುದ್ಧ ಕೈಗೊಂಡ ಕ್ರಮ ಏನು   

ನವದೆಹಲಿ: ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳು ಎಂದು ಘೋಷಿಸಲಾಗಿರುವ ಪೊಲೀಸ್‌ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಸುಪ್ರೀಂಕೋರ್ಟ್‌ ಗುಜರಾತ್‌ ಸರ್ಕಾರವನ್ನು ಕೇಳಿದೆ.

2002ರ ಗುಜರಾತ್‌ ಗಲಭೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಿಲ್ಕಿಸ್‌ ಬಾನು ಅವರಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಹೊಸದಾಗಿ ಮೇಲ್ಮನವಿ ಸಲ್ಲಿಸಲು ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್‌ ಅವರಿದ್ದ ನ್ಯಾಯಪೀಠ ಅವಕಾಶ ನೀಡಿದೆ.

ಸಮರ್ಪಕವಾದ ಪರಿಹಾರ ನೀಡಬೇಕು ಮತ್ತು ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಸಂತ್ರಸ್ತೆ ಮನವಿ ಮಾಡಿದ್ದರು.

ADVERTISEMENT

ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ಕೈಗೊಂಡಿರುವುದರ ಬಗ್ಗೆ ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ನ್ಯಾಯಪೀಠ, ಗುಜರಾತ್‌ ಸರ್ಕಾರಕ್ಕೆ ನಿರ್ದೇಶಿಸಿದೆ.

ಜೊತೆಗೆ, ಪರಿಹಾರ ವಿಚಾರದಲ್ಲಿ ಹೈಕೋರ್ಟ್‌ ತೀರ್ಪಿನ ವಿರುದ್ಧ ಪ್ರತ್ಯೇಕ ಮೇಲ್ಮನವಿ ಸಲ್ಲಿಸುವಂತೆ ಬಿಲ್ಕಿಸ್‌ ಬಾನು ಅವರ ವಕೀಲರಿಗೆ ನ್ಯಾಯ‍ಪೀಠ ಸೂಚಿಸಿದೆ. ಅತ್ಯಾಚಾರ ಪ್ರಕರಣದಲ್ಲಿ 12 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಬಾಂಬೆ ಹೈಕೋರ್ಟ್‌ ಮೇ 4ರಂದು ಎತ್ತಿ ಹಿಡಿದಿತ್ತು. ಅಲ್ಲದೇ ಪೊಲೀಸ್‌ ಸಿಬ್ಬಂದಿ,

ವೈದ್ಯರು ಸೇರಿದಂತೆ ಏಳು ಮಂದಿಯನ್ನು ಖುಲಾಸೆ ಮಾಡಿದ್ದನ್ನು ರದ್ದುಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.