ADVERTISEMENT

ತಪ್ಪು ಚಿಕಿತ್ಸೆ: ವೈದ್ಯರಿಗೆ ರೂ.5 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಕ್ಯಾನ್ಸರ್ ರೋಗವಿಲ್ಲದ ಮಹಿಳಾ ರೋಗಿಯೊಬ್ಬರಿಗೆ ತಪ್ಪು ಚಿಕಿತ್ಸೆ ನೀಡಿ, ಆಕೆಯ ಸಾವಿಗೆ ಕಾರಣರಾಗಿರುವ ಚೆನ್ನೈ ಮೂಲದ ವೈದ್ಯರೊಬ್ಬರಿಗೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ರೂ.5 ಲಕ್ಷ ದಂಡ ವಿಧಿಸಿದೆ. ಈ ಹಣವನ್ನು ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರವಾಗಿ ನೀಡಬೇಕೆಂದು ಆಯೋಗ ನಿರ್ದೇಶನ ನೀಡಿದೆ.

ಕ್ಯಾನ್ಸರ್ ಪರಿಣತರನ್ನು ಸಂಪರ್ಕಿಸದೇ, ಮಹಿಳೆಯೊಬ್ಬರಿಗೆ ಕ್ಯಾನ್ಸರ್ ರೋಗ ಇದೆ ಎಂದು ಹಲವು ಬಾರಿ ಕಿಮೋಥೆರಪಿ ಮಾಡಿ, ಆಕೆಯ ಸಾವಿಗೆ ಕಾರಣರಾದ ಡಾ. ಕುರಿಯನ್ ಜೋಸೆಫ್ ಅವರಿಗೆ ಎನ್‌ಸಿಡಿಆರ್‌ಸಿ ಆಯೋಗ ಈ ನಿರ್ದೇಶನ ನೀಡಿದೆ.

ಘಟನೆ ವಿವರ : ಚೆನ್ನೈನ ಪೆರಂಬಾಕಂ ನಿವಾಸಿ ಗೋವಿಂದರಾಜನ್ ಎಂಬುವವರ ಪುತ್ರಿ ಜಿ.ಉಷಾನಂದಿನಿ ಅವರು ಅನಾರೋಗ್ಯದ ಕಾರಣದಿಂದ ಚೆನ್ನೈನಲ್ಲಿರುವ ಡಾ. ಕುರಿಯನ್ ಅವರ ನರ್ಸಿಂಗ್ ಹೋಂಗೆ ದಾಖಲಾಗಿದ್ದರು. ನರ್ಸಿಂಗ್ ಹೋಂನ ವೈದ್ಯ ಡಾ. ಕುರಿಯನ್ ಜೋಸೆಫ್ ಅವರು ಉಷಾ ಅವರಿಗೆ ಕ್ಯಾನ್ಸರ್ ಇದೆ  ಎಂದು ಹೇಳಿ ಹಲವು ಸುತ್ತು ಕಿಮೊಥೆರಪಿ ಚಿಕಿತ್ಸೆ ನೀಡಿದರು.

ಕ್ಯಾನ್ಸರ್ ಇಲ್ಲದಿದ್ದರೂ ಚಿಕಿತ್ಸೆ ಪಡೆದ ಉಷಾನಂದಿನಿ ಸಾವನ್ನಪ್ಪಿದರು. `ತಪ್ಪು ವೈದ್ಯಕೀಯ ಚಿಕಿತ್ಸೆಯಿಂದ ನನ್ನ ಮಗಳು ಸತ್ತಿದ್ದಾಳೆ' ಎಂದು ಆರೋಪಿಸಿ ತಂದೆ ಗೋವಿಂದರಾಜನ್ ರಾಜ್ಯ ಗ್ರಾಹಕ ನ್ಯಾಯಲಯದಲ್ಲಿ ದೂರು ದಾಖಲಿಸಿದರು.

ಚಿಕಿತ್ಸೆ ನೀಡಿದ ವೈದ್ಯ ಡಾ. ಕುರಿಯನ್ ಕೂಡ ನ್ಯಾಯಾಲಯಕ್ಕೆ ಪ್ರತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ, `ಗರ್ಭಿಣಿಯಾಗಿದ್ದ ಉಷಾನಂದಿನಿ ಅವರು ಸ್ತ್ರೀರೋಗ ಸಂಬಂಧಿಸಿದ ತೊಂದರೆಯೊಂದಿಗೆ ನಮ್ಮ ಆಸ್ಪತ್ರೆಗೆ ದಾಖಲಾದರು. ಅವರನ್ನು ಪರೀಕ್ಷಿಸಿದಾಗ ಆಕೆಗೆ ಗರ್ಭ ಕೋಶದ ಹೊರಗೆ ಭ್ರೂಣ ಬೆಳೆಯುತ್ತಿರುವುದು ಕಂಡು ಬಂತು. ಪ್ರಾಥಮಿಕ ವರದಿಯಲ್ಲಿ ಆಕೆಗೆ ಗರ್ಭಪಾತವಾಗಿರುವುದು ಹಾಗೂ ಕ್ಯಾನ್ಸರ್ ರೋಗದ ಶಂಕೆ ವ್ಯಕ್ತವಾಯಿತು. ಹಾಗಾಗಿ ಆಕೆಗೆ ಕಿಮೊಥೆರಪಿ ಚಿಕಿತ್ಸೆ ನೀಡಿದೆವು' ಎಂದು  ವಿವರಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ರಾಜ್ಯ ಗ್ರಾಹಕ ಆಯೋಗ, `ವ್ಯಕ್ತಿಯಲ್ಲಿ ಕ್ಯಾನ್ಸರ್ ರೋಗವಿದೆ ಎಂಬ ಶಂಕೆ ವ್ಯಕ್ತವಾದಾಗ, ಮೊದಲು ಗ್ರಂಥಿ ವಿಜ್ಞಾನ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು. ಇಲ್ಲವೇ ಬಯಾಪ್ಸಿಯಂತಹ ಪರೀಕ್ಷೆ ನಡೆಸಬೇಕು. ಆದರೆ ಈ ಪ್ರಕರಣದಲ್ಲಿ ವೈದ್ಯರು ಇವೆರಡನ್ನೂ ಮಾಡಿಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಈ ಪ್ರಕರಣದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ರೂ.5 ಲಕ್ಷ  ಪರಿಹಾರ ನೀಡಬೇಕೆಂದು ರಾಜ್ಯ ಗ್ರಾಹಕ ನ್ಯಾಯಾಲಯ ಆದೇಶ ನೀಡಿತು.

ರಾಜ್ಯ ಗ್ರಾಹಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವೈದ್ಯ ಡಾ. ಕುರಿಯನ್ ಅವರು ಎನ್‌ಸಿಡಿಆರ್‌ಸಿಗೆ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ನಡೆಸಿದ ಎನ್‌ಸಿಡಿಆರ್‌ಸಿ, ವೈದ್ಯರ ಅರ್ಜಿಯನ್ನು ತಳ್ಳಿ ಹಾಕಿ, ರಾಜ್ಯ ಆಯೋಗದ ಆದೇಶವನ್ನು ಎತ್ತಿ ಹಿಡಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT