ADVERTISEMENT

ತಮಿಳುನಾಡು ಅರ್ಜಿ ಇಂದು ವಿಚಾರಣೆ

ಕಾವೇರಿ ನದಿ ನೀರು ಹಂಚಿಕೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST

ಬೆಂಗಳೂರು: ಸಾಂಬಾ ಬೆಳೆಗೆ 30 ಟಿಎಂಸಿ ಅಡಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ಸೋಮವಾರ ವಿಚಾರಣೆಗೆ ಬರಲಿದೆ.

ಕಾವೇರಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸುವ ಸಂಬಂಧ ಸುಪ್ರೀಂ   ಕೋರ್ಟ್ ಸೂಚನೆಯಂತೆ ಬೆಂಗಳೂರಿನಲ್ಲಿ ನವೆಂಬರ್ 29ರಂದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಮಧ್ಯೆ ನಡೆದ ಮಾತುಕತೆ ಮುರಿದುಬಿದ್ದ ಕಾರಣ, ವಿವಾದದ ಚೆಂಡು ಪುನಃ ನ್ಯಾಯಾಲಯದ ಅಂಗಳದಲ್ಲಿದೆ.

ನೀರು ಹಂಚಿಕೆ ವಿವಾದ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನೀರಿನ ಲಭ್ಯತೆ ಹಾಗೂ ಅಗತ್ಯತೆ ಕುರಿತ ಮಾಹಿತಿ ನೀಡುವಂತೆ ಉಭಯ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು.

ಅದರ ಅನ್ವಯ ಮಾಹಿತಿ ನೀಡಿರುವ ರಾಜ್ಯ ಸರ್ಕಾರ, `ರಾಜ್ಯದಲ್ಲಿ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆ ಹಾಗೂ ಕುಡಿಯುವ ನೀರು ಪೂರೈಕೆಗೆ ಒಟ್ಟು 78 ಟಿಎಂಸಿ ಅಡಿ ನೀರು ಬೇಕು. ಆದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಈಗ ಕೇವಲ 38 ಟಿಎಂಸಿ ಅಡಿ ನೀರು ಲಭ್ಯವಿದೆ. 

ಪರಿಸ್ಥಿತಿ ಹೀಗಿರುವಾಗ ತಮಿಳುನಾಡಿಗೆ 30 ಟಿಎಂಸಿ ಅಡಿ ನೀರು ಬಿಡುವುದು ಕಷ್ಟಸಾಧ್ಯ' ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಧ್ಯಕ್ಷತೆಯ ಕಾವೇರಿ ನದಿ ಪ್ರಾಧಿಕಾರ (ಸಿಆರ್‌ಎ), ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ಉಸ್ತುವಾರಿ ಸಮಿತಿ (ಸಿಎಂಸಿ) ನೀಡಿರುವ ಆದೇಶದ ಅನುಸಾರ ತಮಿಳುನಾಡಿಗೆ ಈಗಾಗಲೇ ಬಿಟ್ಟಿರುವ ನೀರಿನ ಪ್ರಮಾಣವನ್ನೂ ಕರ್ನಾಟಕ ಸರ್ಕಾರ, ಶನಿವಾರ ಸಲ್ಲಿಸಿರುವ ಪ್ರಮಾಣಪತ್ರದ ಮೂಲಕ ವಿವರಿಸಿದೆ.

ರಾಜ್ಯದ ಕಾವೇರಿ ನದಿ ಕಣಿವೆಯ ಜಲಾಶಯಗಳಲ್ಲಿ ಇರುವ ನೀರಿನ ಸಂಗ್ರಹ, ಇಲ್ಲಿನ ಅವಶ್ಯಕತೆಗಳನ್ನು ಮಾತ್ರ ಪೂರೈಸಲು ಸಾಕಾಗುವಷ್ಟಿದೆ ಎಂಬುದನ್ನು ಈ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದ ಸಿಎಂಸಿ ಅಧ್ಯಯನ ತಂಡವೂ ಹೇಳಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.