ADVERTISEMENT

ತಮಿಳುನಾಡು ವಾದ ಅಸಮರ್ಥನೀಯ: ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 19:50 IST
Last Updated 4 ಡಿಸೆಂಬರ್ 2012, 19:50 IST

ನವದೆಹಲಿ (ಪಿಟಿಐ): `ಕಾವೇರಿ ನದಿಯಿಂದ ಕನಿಷ್ಠ 30ಟಿಎಂಸಿ ಅಡಿ ನೀರು ಬೀಡಬೇಕೆನ್ನುವ ತಮಿಳುನಾಡಿನ ಮನವಿ ಸಮರ್ಥನೀಯವಲ್ಲ. ಭಾವನಾತ್ಮಕ ನೆಲೆಯಲ್ಲಿ ನ್ಯಾಯಾಲಯ ತೀರ್ಪು ನೀಡಬಾರದು' ಎಂದು ಕರ್ನಾಟಕವು ಮಂಗಳವಾರ ಸುಪ್ರೀಂಕೋರ್ಟ್ ಮುಂದೆ ಅರಿಕೆ ಮಾಡಿಕೊಂಡಿದೆ.

ನ್ಯಾಯಮೂರ್ತಿ ಡಿ.ಕೆ.ಜೈನ್ ಹಾಗೂ ಮದನ್ ಬಿ. ಲೋಕೂರ್ ಅವರನ್ನು ಒಳಗೊಂಡ ಪೀಠದ ಮುಂದೆ ಉಭಯ ರಾಜ್ಯಗಳು ವಾದ- ಪ್ರತಿವಾದ ಮಂಡಿಸಿದವು.

` ನಮ್ಮ ಪಾಲಿನ ನೀರನ್ನು ಬಿಡದೇ ಕರ್ನಾಟಕ ನೆಪ ಹೇಳುತ್ತಿದೆ' ಎಂದು ತಮಿಳುನಾಡು ಆರೋಪಿಸಿದರೆ, `ಹೆಚ್ಚು ನೀರು ಪಡೆಯುವುದಕ್ಕಾಗಿ  ಕೋರ್ಟ್ ಮುಂದೆ ತಮಿಳುನಾಡು ಭಾವುಕವಾಗಿ ಮನವಿ ಮಾಡಿಕೊಳ್ಳುತ್ತಿದೆ' ಎಂದು ಕರ್ನಾಟಕ ಪ್ರತ್ಯಾರೋಪ ಮಾಡಿತು.

ಕರ್ನಾಟಕದ ಪರ ಹಿರಿಯ ವಕೀಲ ಅನಿಲ್ ದಿವಾನ್, `ಪ್ರಧಾನಿ ನೇತೃತ್ವದ ಕಾವೇರಿ ಮೇಲ್ವಿಚಾರಣಾ ಸಮಿತಿ (ಸಿಎಂಸಿ) ಹಾಗೂ ಕಾವೇರಿ ನದಿ ಪ್ರಾಧಿಕಾರದ (ಸಿಆರ್‌ಎ) ನಿರ್ಧಾರಗಳನ್ನು ತಮಿಳುನಾಡು ಪ್ರಶ್ನಿಸಿಲ್ಲ. ಹಾಗಾಗಿ ಹೆಚ್ಚಿನ ನೀರು ಬಿಡಬೇಕೆನ್ನುವ ಅದರ ಮನವಿ ಸಮರ್ಥನೀಯವಲ್ಲ' ಎಂದು ವಾದಿಸಿದರು.

` ಉಭಯ ರಾಜ್ಯಗಳ ನಡುವಿನ ವಿವಾದ ಇತ್ಯರ್ಥಕ್ಕೆ ಸೂತ್ರವಿದೆ. ಆದರೆ ತಮಿಳುನಾಡು ಇದನ್ನು ಅನುಸರಿಸಿಲ್ಲ. ಸಿಆರ್‌ಎ ಹಾಗೂ ಸಿಎಂಸಿ ನಿರ್ಧಾರಗಳನ್ನು ಅದು ಪ್ರಶ್ನಿಸಿಲ್ಲ. ಅದರ ಬದಲು ಮಧ್ಯಂತರ ಮನವಿ ಸಲ್ಲಿಸಿದೆ' ಎಂದೂ ಅವರು ದೂರಿದರು.

` ನೀರು ಬಿಟ್ಟರೆ ಕರ್ನಾಟಕದ ರೈತರು ಸಂಕಷ್ಟ ಅನುಭವಿಸಬೇಕಾಗುತ್ತದೆ. ತಮಿಳುನಾಡಿನ ರೈತರು ಕಷ್ಟದಲ್ಲಿದ್ದಾರೆ ಎನ್ನುವುದು ಭಾವುಕತನದ ಮಾತಾಗುತ್ತದೆ. ನಾವು ಈ ನಿಟ್ಟಿನಲ್ಲಿ ಯೋಚಿಸಬಾರದು. ಸೂಕ್ತ ವಿಧಾನದ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳಬೇಕು' ಎಂದೂ ಅವರು ಪ್ರತಿಪಾದಿಸಿದರು.

` ನಮ್ಮ ಪಾಲಿನ ನೀರನ್ನು ಕರ್ನಾಟಕವು ತಪ್ಪಾಗಿ ಅಂದಾಜು ಮಾಡಿದೆ' ಎಂದು ತಮಿಳುನಾಡು ಆರೋಪಿಸಿತು. `ನಮ್ಮ 15 ಲಕ್ಷ ಎಕರೆ ಭೂಮಿ ಪಾಳು ಬೀಳುತ್ತದೆ. ದೇಶದ ಆಹಾರ ಭದ್ರತೆಯು ಎಲ್ಲರ ಕಾಳಜಿಯಾಗಬೇಕು. ಕರ್ನಾಟಕವು ನಮ್ಮ ಪಾಲಿನ ನೀರನ್ನು ಬೀಡಲೇ ಬೇಕು' ಎಂದು ಹಿರಿಯ ವಕೀಲ ಸಿ.ಎಸ್.ವೈದ್ಯನಾಥನ್ ಅವರು ತಮಿಳುನಾಡು ಪರ ವಾದಿಸಿದರು. ಅಲ್ಲದೇ ತಮಿಳುನಾಡಿಗೆ 39 ಟಿಎಂಸಿ ಅಡಿ ನೀರಿನ ಕೊರತೆ ಆಗಿದೆ ಎಂದೂ ಹೇಳಿದರು.

`ಭಾವನಾತ್ಮಕ ನೆಲೆಯಲ್ಲಿ ಮನವಿ ಮಾಡಿಕೊಳ್ಳುವುದು ಸಮಂಜಸವಲ್ಲ. ವಾಸ್ತವಾಂಶಗಳನ್ನು ಆಧರಿಸಿ ಆದೇಶ ನೀಡಲಾಗುತ್ತದೆ' ಎಂದು ಪೀಠ ಹೇಳಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.