ADVERTISEMENT

ತಿರುಪತಿಯಲ್ಲಿ ಭಕ್ತರ ಪರದಾಟ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 19:34 IST
Last Updated 24 ಸೆಪ್ಟೆಂಬರ್ 2013, 19:34 IST

ಹೈದರಾಬಾದ್: ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ನಡೆಯುತ್ತಿರುವ ಬಂದ್‌ನಿಂದಾಗಿ ಆಂಧ್ರದ ಪ್ರಸಿದ್ಧ ಯಾತ್ರಾಸ್ಥಳ ತಿರುಮಲಕ್ಕೆ ತೆರಳಬೇಕಿದ್ದ ಸುಮಾರು 30,000 ಯಾತ್ರಾರ್ಥಿಗಳು ಮಂಗಳವಾರ ಪರದಾಡುವಂತಾಯಿತು.

ಸಮೈಕ್ಯ ರಾಷ್ಟ್ರ ಪರಿರಕ್ಷಣಾ ವೇದಿಕೆ ಕರೆ ನೀಡಿದ್ದ ಬಂದ್ ವೇಳೆ ತಿರುಮಲ ಬೆಟ್ಟಕ್ಕೆ ತೆರಳಬೇಕಿದ್ದ ಎಲ್ಲ ರಸ್ತೆಗಳನ್ನು ಮುಚ್ಚಲಾಗಿತ್ತು. ಖಾಸಗಿ ಬಸ್‌, ಟ್ಯಾಕ್ಸಿ ಹಾಗೂ ದ್ವಿಚಕ್ರವಾಹನಗಳನ್ನು ಘಟ್ಟದ ರಸ್ತೆ  ಆರಂಭವಾಗುವ ಅಲಿಪಿರಿಯಿಂದಲೇ ಪ್ರತಿಭಟನಾಕಾರರು ತಡೆದ ಕಾರಣ ವೆಂಕಟೇಶ್ವರನ ದರ್ಶನ ಪಡೆಯಲು ಭಕ್ತರು ಪರದಾಡಿದರು. ಇದರಿಂದಾಗಿ ಸಾವಿರಾರು ಭಕ್ತರು ತಿರುಪತಿ ಪಟ್ಟಣದಲ್ಲೇ ಉಳಿಯುವಂತಾಯಿತು.

ಸೀಮಾಂಧ್ರ ಜಿಲ್ಲೆಯ 13 ತಾಲ್ಲೂಕುಗಳಲ್ಲಿ ಸಮೈಕ್ಯ ರಾಷ್ಟ್ರ ಪರಿರಕ್ಷಣಾ ವೇದಿಕೆ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಂದ್‌ಗೆ ಕರೆ ನೀಡಿತ್ತು. ಖಾಸಗಿ ವಾಹನಗಳಲ್ಲಿ ತೆರಳಿ ಇಲ್ಲವೇ ನಡೆದುಕೊಂಡೇ ವೆಂಕಟೇಶ್ವರನ ದರ್ಶನ ಪಡೆಯಲು ಭಕ್ತರು ಸಂಜೆವರೆಗೂ ಕಾದಿದ್ದರು.

ಈ ಹಿಂದೆ ಹಲವು ಬಾರಿ ನಡೆದ ಬಂದ್‌ ನಿಂದಾಗಿ ತಿರುಪತಿಯಲ್ಲಿ ತೊಂದರೆಯಾಗಿದ್ದರೂ ತಿರುಮಲಕ್ಕೆ ತೆರಳುವ ವಾಹನಗಳಿಗೆ ಯಾವುದೇ ಅಡಚಣೆಯಾಗಿರಲಿಲ್ಲ. ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮ 700 ಬಸ್‌ಗಳ ಬದಲಿಗೆ ಭಕ್ತರಿಗೆ ತೊಂದರೆಯಾಗದಿ ರಲೆಂದು 107 ಬಸ್‌ಗಳನ್ನು ತಿರುಮಲಕ್ಕೆ ಸಂಚರಿಸಲು ಅನುವು ಮಾಡಿಕೊಟ್ಟಿತ್ತು.

ಆದರೆ ಮಂಗಳವಾರದ ಬಂದ್ ಬಗ್ಗೆ ತಿಳಿಯದೇ ಬಂದ ಭಕ್ತರು ಮಾತ್ರ ತೊಂದರೆಗೊಳಗಾದರು.

‘ನಮಗೆ ಬಂದ್‌ ಬಗ್ಗೆ ಗೊತ್ತಿರಲಿಲ್ಲ. ತಿಳಿದಿದ್ದರೆ ಪ್ರವಾಸವನ್ನು ಮೊಟಕು ಮಾಡುತ್ತಿದ್ದೆವು’ ಎಂದು ಕೊಚ್ಚಿಯಿಂದ ಬಂದಿದ್ದ ಯಾತ್ರಾರ್ಥಿ ಕಲ್ಲೂರಿತಲ್ಲಿ ಸತೀಶ್‌ ಹೇಳಿದರು. ತಿರುಪತಿಯಲ್ಲಿ ಸಿಕ್ಕಿಹಾಕಿಕೊಂಡ ಜನರಿಗೆ ತಿರುಮಲ ದೇವಸ್ಥಾನ ಮಂಡಳಿ ಆಹಾರ ಹಾಗೂ ಇತರ ನೆರವು ನೀಡಿತು.

ರಾಜ್ಯದಿಂದ ಬಸ್‌ ಸ್ಥಗಿತ
ಬೆಂಗಳೂರು: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ವಿರುದ್ಧ ಆಂಧ್ರಪ್ರದೇಶದಲ್ಲಿ ಗಲಭೆ ಹೆಚ್ಚಾದ ಕಾರಣದಿಂದ ಕಳೆದ ತಿಂಗಳಿನಿಂದ ತಿರುಪತಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ)  ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಅಶೋಕ್‌ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.