ADVERTISEMENT

ತಿವಾರಿ ಸಾವು ಪ್ರಕರಣ: ಸಿಬಿಐಗೂ ಸಿಕ್ಕಿಲ್ಲ ಯಾವುದೇ ಸುಳಿವು

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 20:02 IST
Last Updated 5 ಜುಲೈ 2017, 20:02 IST
ತಿವಾರಿ ಸಾವು ಪ್ರಕರಣ: ಸಿಬಿಐಗೂ ಸಿಕ್ಕಿಲ್ಲ ಯಾವುದೇ ಸುಳಿವು
ತಿವಾರಿ ಸಾವು ಪ್ರಕರಣ: ಸಿಬಿಐಗೂ ಸಿಕ್ಕಿಲ್ಲ ಯಾವುದೇ ಸುಳಿವು   

ಲಖನೌ: ಕರ್ನಾಟಕ ವೃಂದದ ಐಎಎಸ್‌ ಅಧಿಕಾರಿ ಅನುರಾಗ್ ತಿವಾರಿ ಸಾವಿನ ರಹಸ್ಯಗಳನ್ನು ಬೇಧಿಸಲು, ಸಿಬಿಐ ಅಧಿಕಾರಿಗಳು ತಿವಾರಿ ಅವರ ಒಳಾಂಗಗಳ ಪರೀಕ್ಷಾ ವರದಿಗಾಗಿ ಎದುರು ನೋಡುತ್ತಿದ್ದಾರೆ.

‘ತನಿಖೆ ಆರಂಭಿಸಿ ತಿಂಗಳು ಕಳೆದರೂ, ಪ್ರಕರಣದ ಇತ್ಯರ್ಥಕ್ಕೆ ನೆರವಾಗುವ ಯಾವುದೇ ಸುಳಿವೂ ಸಿಕ್ಕಿಲ್ಲ’ ಎಂದು ಸಿಬಿಐ ಮೂಲಗಳು ಹೇಳಿವೆ.

‘ಅನುರಾಗ್ ತಿವಾರಿ ಅವರ ಒಳಾಂಗಗಳ ಪರೀಕ್ಷೆಗಾಗಿ, ಅವನ್ನು ಚಂಡೀಗಡದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮುಂದಿನ ವಾರ ಪರೀಕ್ಷೆಯ ವರದಿ ಕೈಸೇರುವ ಸಾಧ್ಯತೆ ಇದೆ. ಅದರಿಂದಾದರೂ ಯಾವುದಾದರೂ ಸುಳಿವು ದೊರೆಯುತ್ತದೆಯೇ ಎಂಬುದನ್ನು ನೋಡಬೇಕು’ ಎಂದು ಮೂಲಗಳು ಹೇಳಿವೆ.

ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಾಗಿದ್ದ  ತಿವಾರಿ ಅವರ ಶವ, ಮೇನಲ್ಲಿ ಇಲ್ಲಿನ ಅತಿಥಿಗೃಹದ ಬಳಿಯ ರಸ್ತೆಯಲ್ಲಿ ಪತ್ತೆಯಾಗಿತ್ತು.

‘ತಿವಾರಿ ಸಾವಿನ ಹಿಂದೆ ಅವರ ಹಿರಿಯ ಅಧಿಕಾರಿಗಳ ಕೈವಾಡ ಇರುವ ಸಾಧ್ಯತೆ ಇದೆ. ಅವರು, ಇಲಾಖೆಯಲ್ಲಿನ ಅವ್ಯವಹಾರಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಅವು ಬಹಿರಂಗವಾದರೆ, ತಮಗೆ ತೊಂದರೆಯಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಈ ಸಂಚು ರೂಪಿಸಿದ್ದಾರೆ’ ಎಂದು ತಿವಾರಿ ಅವರ ಕುಟುಂಬದವರು ಆರೋಪಿಸಿದ್ದರು.

ಆದರೆ, ಪೊಲೀಸರು, ‘ಹೆಚ್ಚಿನ ಪ್ರಮಾಣದಲ್ಲಿ ಔಷಧ ಸೇವಿಸಿರುವ ಕಾರಣ ಸಾವು ಸಂಭವಿಸಿರಬಹುದು’ ಎಂದು ಶಂಕಿಸಿದ್ದರು. ಆದರೆ, ಹೃದಯಾಘಾತದಿಂದ ಸಾವು ಸಂಭವಿಸಿಲ್ಲ ಎಂಬುದು ಶವಪರೀಕ್ಷೆಯಲ್ಲಿ ದೃಢಪಟ್ಟ ನಂತರ ಪ್ರಕರಣದ ನಿಗೂಢತೆ ಹೆಚ್ಚಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.