ADVERTISEMENT

ತುಂಬಾ ನಿರಾಶೆಯಾಗಿದೆ: ಸೋನಿಯಾ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 19:35 IST
Last Updated 8 ಡಿಸೆಂಬರ್ 2013, 19:35 IST

ನವದೆಹಲಿ (ಪಿಟಿಐ): ‘ನಾಲ್ಕು ರಾಜ್ಯಗಳ ಮತದಾರರು ನೀಡಿದ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ, ಆದರೆ ಇದರಿಂದ ಪಕ್ಷಕ್ಕೆ ತುಂಬ ನಿರಾಶೆಯಾಗಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಇಲ್ಲಿಯ ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋನಿಯಾ ಹಾಗೂ ಪುತ್ರ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ‘ಈ ಫಲಿತಾಂಶ ನಮಗೆ ‘ಆತ್ಮಾವಲೋಕನ’ ಮಾಡಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದೆ’ ಎಂದರು.

‘ಜನ ಸಹಜವಾಗಿ ಅತೃಪ್ತ ಗೊಂಡಿದ್ದಾರೆ ಅನಿಸುತ್ತಿದೆ. ಇಲ್ಲದಿದ್ದರೆ ಅವರು ಇಂತಹ ತೀರ್ಪು ನೀಡುತ್ತಿರಲಿಲ್ಲ. ಸೋಲಿಗೆ ಕಾರಣಗಳು ಹಲವಾರು,  ಅದರಲ್ಲಿ ಬೆಲೆ ಏರಿಕೆ ವಿಷಯವೂ ಸೇರಿದೆ’ ಎಂದು ಸೋನಿಯಾ ಹೇಳಿದರು.

ಸೋನಿಯಾ ಇಂದು 67ಕ್ಕೆ..
ಸೋಮವಾರ ಸೋನಿಯಾ ಗಾಂಧಿ 67ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ನಾಯಕ ನೆಲ್ಸನ್‌ ಮಂಡೇಲಾ ಅವರ ನಿಧನದ ಶೋಕಾಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹುಟ್ಟು ಹಬ್ಬದ ಯಾವುದೇ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಿವಿಧ ರಾಜ್ಯಗಳ ಫಲಿತಾಂಶಗಳಿಗೂ ಸೋನಿಯಾ ಹುಟ್ಟುಹಬ್ಬದ ಕಾರ್ಯಕ್ರಮಗಳಿಗೂ ಸಂಬಂಧ ಇಲ್ಲ ಎಂದೂ ಈ ಮೂಲಗಳು ಸ್ಪಷ್ಟಪಡಿಸಿವೆ.

ರಾಹುಲ್‌ ಪ್ರಧಾನಿ ಅಭ್ಯರ್ಥಿ: ಶಂಕೆ ಮೂಡಿಸಿದ ಹೇಳಿಕೆ
ನವದೆಹಲಿ (ಪಿಟಿಐ): ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರ, ರಾಹುಲ್‌ ಗಾಂಧಿ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗುವುದೇ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ರಾಹುಲ್‌ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಹೆಸರಿಸಲಾಗುವುದೇ ಎಂದು ಪತ್ರಕರ್ತರು ಕೇಳಿದಾಗ, ‘ಈ ಬಗ್ಗೆ ಜನರು ಚಿಂತಿಸುವ ಅಗತ್ಯವಿಲ್ಲ. ಸೂಕ್ತ ಸಂದರ್ಭದಲ್ಲಿ ಪ್ರಧಾನಿ ಅಭ್ಯರ್ಥಿ ಹೆಸರನ್ನು ಪ್ರಕಟಿಸಲಾಗುವುದು’ (“At the opportune time, the name of the PM candidate...the name of him will be announced”) ಎಂದು ಗಾಂಧಿ ಪ್ರತಿಕ್ರಿಯಿಸಿದರು.

‌ಸೋನಿಯಾ “him” (ಅವನ) ಎಂಬ ಪದ ಬಳಸಿದ್ದು ಈ ಅನುಮಾನಕ್ಕೆ ಕಾರಣವಾಗಿದೆ. ಬಹುಶಃ ಪುತ್ರ ರಾಹುಲ್‌ನ ಹೆಸರು ಮನಸ್ಸಿನಲ್ಲಿರುವುದರಿಂದಲೇ ತಮಗೆ ಅರಿವಿಲ್ಲದಂತೆಯೇ “him” ಎಂಬ ಪದ ಹೊರಬಿದ್ದಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಒಂದಂತೂ ಸ್ಪಷ್ಟ. ಸೋನಿಯಾ ಅವರು ಪುಲ್ಲಿಂಗ ಸೂಚಕವಾದ “him” ಎಂಬುದನ್ನು ಬಳಸಿರುವುದರಿಂದ ಪ್ರಧಾನಿ ಅಭ್ಯರ್ಥಿಯಾಗಿ ಮಹಿಳೆಯನ್ನು ಪರಿಗಣಿಸುವ ಸಾಧ್ಯತೆ ಇಲ್ಲವೆನ್ನುವುದು ಖಚಿತವಾಗಿದೆ ಎಂದೂ ಕೆಲವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT