ADVERTISEMENT

ತೆಲಂಗಾಣ: ಇಕ್ಕಟ್ಟಿನಲ್ಲಿ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 19:59 IST
Last Updated 2 ಆಗಸ್ಟ್ 2013, 19:59 IST

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, `ಪ್ರತ್ಯೇಕ ತೆಲಂಗಾಣ' ರಚನೆ ತೀರ್ಮಾನ ಪ್ರತಿಭಟಿಸಿ ಕಾಂಗ್ರೆಸ್ ಪಕ್ಷದ ಏಳು ಸಂಸದರು ಶುಕ್ರವಾರ ರಾಜೀನಾಮೆ ಸಲ್ಲಿಸಿದರು. ಇನ್ನೂ ಕೆಲವರು ರಾಜೀನಾಮೆಗೆ ಮುಂದಾಗಿರುವುದರಿಂದ ಕಾಂಗ್ರೆಸ್ ಇಕ್ಕಟ್ಟಿಗೆ ಸಿಕ್ಕಿಕೊಂಡಿದೆ.

ರಾಜೀನಾಮೆ ಸಲ್ಲಿಸಿದ ಏಳು ಮಂದಿ ಸಂಸದರು ಸೀಮಾಂಧ್ರಕ್ಕೆ ಸೇರಿದವರು. ಸಾಯಿ ಪ್ರತಾಪ್ (ರಾಜಂಪೇಟೆ) ಅನಂತ ವೆಂಕಟರಾಮಿ ರೆಡ್ಡಿ (ಅನಂತಪುರ), ಸಿ.ವಿ. ಹರ್ಷಕುಮಾರ್ (ಅಮಲಾಪುರ ಮೀಸಲು), ವಿ. ಅರುಣ್ ಕುಮಾರ್ (ರಾಜಮಹೇಂದ್ರಿ), ಲಗಡಪಾಟಿ ರಾಜಗೋಪಾಲ್ (ವಿಜಯವಾಡ), ಎಸ್. ಪಿ. ವೈ. ರೆಡ್ಡಿ (ನಂದ್ಯಾಲ) ಹಾಗೂ ರಾಜ್ಯಸಭೆ ಸದಸ್ಯ ಕೆ. ವಿ. ಪಿ ರಾಮಚಂದ್ರ ರಾವ್ ಕ್ರಮವಾಗಿ ಲೋಕಸಭೆ ಹಾಗೂ ರಾಜ್ಯಸಭೆ ಮಹಾ ಕಾರ್ಯದರ್ಶಿಗಳಿಗೆ ರಾಜೀನಾಮೆ ಸಲ್ಲಿಸಿದರು.

ಸಬ್ಬಂ ಹರಿ (ಅನಕಾಪಲ್ಲಿ), ಮಾಗುಂಟ ಶ್ರೀನಿವಾಸುಲು ರೆಡ್ಡಿ (ಒಂಗೋಲು) ಹಾಗೂ ರಾಯಪಾಟಿ ಸಾಂಬಶಿವರಾವ್ (ಗುಂಟೂರು) ಅವರೂ ರಾಜೀನಾಮೆ ಪತ್ರಗಳನ್ನು ಫ್ಯಾಕ್ಸ್ ಮಾಡಿದ್ದಾರೆ. ಯಾವುದೇ ಒತ್ತಡಕ್ಕೆ ಮಣಿಯದೆ, ಸ್ವಂತ ತೀರ್ಮಾನದಿಂದ ರಾಜೀನಾಮೆ ನೀಡುತ್ತಿರುವುದಾಗಿ ಸಂಸದರು ಸ್ಪಷ್ಟಪಡಿಸಿದರು.

ಕೇಂದ್ರದಲ್ಲಿ ಆಂಧ್ರ ಪ್ರತಿನಿಧಿಸಿರುವ ಕೆಲವು ಸಚಿವರು ಹಾಗೂ ಸಂಸದರು ಗುರುವಾರ ರಾತ್ರಿ ಕೆ. ವಿ. ಪಿ. ರಾಮಚಂದ್ರರಾವ್ ಮನೆಯಲ್ಲಿ ಸಭೆ ಸೇರಿ ಸಮಾಲೋಚಿಸಿದ ಬಳಿಕ ರಾಜೀನಾಮೆ ಕೊಡುವ ತೀರ್ಮಾನ ಪ್ರಕಟಿಸಿದರು. ಆದರೆ, ದುಡುಕಿನ ಹೆಜ್ಜೆ ಇಡಬಾರದೆಂದು ಸಭೆಯಲ್ಲಿದ್ದ ಸಚಿವರು ಸಂಸದರ ಮನವೊಲಿಸುವ ಪ್ರಯತ್ನ ಮಾಡಿದರು. ಸೋಮವಾರದಿಂದ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದ ಕಲಾಪಕ್ಕೆ ಅಡ್ಡಿ ಮಾಡುವ ಮೂಲಕ
ಆಂಧ್ರ ವಿಭಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ವಿರೋಧಿಸಬಹುದೆಂದು ಕೆಲವರು ಅಭಿಪ್ರಾಯಪಟ್ಟರು.

ದಿಗ್ವಿಜಯ್ ಮನವೊಲಿಕೆ: ಕೇಂದ್ರ ಮಂತ್ರಿ ಮಂಡಳದಲ್ಲಿ ಸೀಮಾಂಧ್ರ  ಪ್ರತಿನಿಧಿಸಿರುವ ಎಂ.ಎಂ. ಪಲ್ಲಂರಾಜು, ಡಿ. ಪುರಂದರೇಶ್ವರಿ, ಜೆ.ಡಿ. ಶೀಲಂ, ಕಿಲ್ಲಿ ಕೃಪಾರಾಣಿ ಹಾಗೂ ಸೂರ್ಯಪ್ರಕಾಶ ರೆಡ್ಡಿ ಅವರೂ ರಾಜ್ಯ ವಿಭಜನೆ ಕುರಿತು ತೀವ್ರ ಅಸಮಾಧಾನ ಹೊಂದಿದ್ದು ರಾಜೀನಾಮೆ ನೀಡುವ ಬಗ್ಗೆ ಚಿಂತಿಸಿದ್ದರು. ಆದರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಸಚಿವರ ಮನವೊಲಿಸಿದ್ದು, ಲೋಕಸಭೆಯಲ್ಲಿ ತೆಲಂಗಾಣ ರಾಜ್ಯ ರಚನೆ ಮಸೂದೆ ಚರ್ಚೆಗೆ ಬಂದಾಗ ಸಿಟ್ಟು ಹೊರಹಾಕಲು ಅವಕಾಶವಿದೆ ಎಂದು ಹೇಳಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ  ಮಹತ್ವದ ಆಹಾರ ಭದ್ರತೆ ಹಾಗೂ ಭೂಸ್ವಾಧೀನ ಮಸೂದೆಗಳನ್ನು ಮಂಡಿಸಲು ಸಿದ್ಧತೆ ನಡೆಸಿರುವಾಗಲೇ ಆಂಧ್ರ ಸಂಸದರು ರಾಜೀನಾಮೆ ಸಲ್ಲಿಸಿದ್ದಾರೆ. 

ಆಂತರಿಕ ವಿಚಾರ: ಆಂಧ್ರದ ಬಿಕ್ಕಟ್ಟು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದ್ದು, ಇದನ್ನು ಸಮರ್ಪಕವಾಗಿ ಬಗೆಹರಿಸಿಕೊಳ್ಳಲಿದೆ ಎಂದು ಕಾಂಗ್ರೆಸ್ ವಕ್ತಾರ ಜನಾರ್ದನ ದ್ವಿವೇದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT