ADVERTISEMENT

ತೆಲಂಗಾಣ ಗದ್ದಲ : 11 ಸದಸ್ಯರ ಅಮಾನತು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 9:20 IST
Last Updated 2 ಸೆಪ್ಟೆಂಬರ್ 2013, 9:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ) : ತೆಲಂಗಾಣ ರಾಜ್ಯ ರಚನೆಯನ್ನು ವಿರೋಧಿಸಿ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಕಾರಣಕ್ಕೆ ಆಂಧ್ರ ಪ್ರದೇಶದ 11ಸದಸ್ಯರನ್ನು ಸೋಮವಾರ ಅಮಾನತು ಮಾಡಲಾಯಿತು.

ಅಖಂಡ ಆಂಧ್ರ ಪ್ರದೇಶಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆಯ ಒಂಬತ್ತು ಸದಸ್ಯರು ಹಾಗೂ ರಾಜ್ಯಸಭೆಯ ಇಬ್ಬರು ಸದಸ್ಯರನ್ನು ಮುಂದಿನ ಐದು ಅಧಿವೇಶನದಿಂದ ಅಮಾನತು ಮಾಡಲಾಗಿದೆ.

ಲೋಕಸಭೆ ಕಲಾಪ 11 ಗಂಟೆಗೆ ಪುನರ್‌ಆರಂಭಗೊಂಡಾಗ ಆಂಧ್ರ ಭಾಗದ ಸದಸ್ಯರು ತೆಲಂಗಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಘೋಷಣೆಗಳನ್ನು ಕೂಗಿದರು. ಈ ವೇಳೆ ಸ್ಪೀಕರ್ ಮೀರಾ ಕುಮಾರ್ ಅವರು 374(ಎ)ನೇ ವಿಧಿಯ ಅನ್ವಯ ತೆಲುಗು ದೇಶಂ ಪಕ್ಷದ (ಟಿಡಿಪಿ) ಎನ್. ಕೃಷ್ಣಪ್ಪ, ಮೊದಗುಲು ವೇಣುಗೋಪಾಲ ರೆಡ್ಡಿ, ಕೆ. ನಾರಾಯಣ ರಾವ್ ಮತ್ತು ನಿರ್ಮಲಲ್ಲಿ ಶಿವಪ್ರಸಾದ್ ಹಾಗೂ ಕಾಂಗ್ರೆಸ್‌ನ ಸಾಯಿ ಪ್ರತಾಪ್, ಅನಂತ ವೆಂಕಟರಾಮಿ ರೆಡ್ಡಿ, ಎಲ್. ರಾಜಗೋಪಾಲ, ಮುಗುಂಟ ಶ್ರೀನಿವಾಸುಲು ರೆಡ್ಡಿ, ಮತ್ತು ಬಾಪಿ ರಾಜು ಕನುಮುರು ಅವರನ್ನು ಅಮಾನತು ಮಾಡಿದರು.

ಈ ಒಂಬತ್ತು ಸದಸ್ಯರು ತೆಲಂಗಾಣ ವಿಷಯವಾಗಿ ಆಗಸ್ಟ್ 23 ರಂದು ಅಮಾನತುಗೊಂಡ 12 ಮಂದಿ ಸದಸ್ಯರಲ್ಲಿ ಸೇರಿದವರಾಗಿದ್ದಾರೆ.

ಇತ್ತ ರಾಜ್ಯಸಭೆಯಲ್ಲೂ ಸಹ ಆಂಧ್ರ ವಿಭಜನೆ ವಿಷಯ ಕಲಾಪಕ್ಕೆ ಅಡ್ಡಿಪಡಿಸಿತು. 15 ನಿಮಿಷಗಳ ಬಳಿಕ ಮತ್ತೆ ಕಲಾಪ ಆರಂಭವಾದಾಗ ತೆಲಂಗಾಣ ಗದ್ದಲ ತಾರಕಕ್ಕೇರಿತು. ಈ ವೇಳೆ ಉಪ ಸಭಾಪತಿ ಪಿ.ಜೆ. ಕುರೈನ್ ಅವರು ಟಿಡಿಪಿ ಸದಸ್ಯರಾದ ಸಿ.ಎಂ. ರಮೇಶ್ ಮತ್ತು ವೈ.ಆರ್ಚೌ. ಧರಿ ಅವರನ್ನು ಅಮಾನತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.