ADVERTISEMENT

ತೆಲಂಗಾಣ ಬಂದ್ ಹೈದರಾಬಾದ್‌ನಲ್ಲಿ ವಿಫಲ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 20:00 IST
Last Updated 15 ಜೂನ್ 2013, 20:00 IST

ಹೈದರಾಬಾದ್ (ಪಿಟಿಐ/ಐಎಎನ್‌ಎಸ್): ವಿಧಾನಸಭೆ ಚಲೋ ಕೈಗೊಂಡಿದ್ದ ಪ್ರತಿಭಟನಾಕಾರರನ್ನು ಬಂಧಿಸಿದ ಕ್ರಮವನ್ನು ವಿರೋಧಿಸಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಶನಿವಾರ ಕರೆ ನೀಡಿದ್ದ ತೆಲಂಗಾಣ ಬಂದ್ ಹೈದರಾದ್‌ನಲ್ಲಿ ವಿಫಲಗೊಂಡಿದೆ.

ಬಂದ್‌ನಿಂದ ತೆಲಂಗಾಣ ಪ್ರಾಂತ್ಯದ ಒಟ್ಟು 10 ಜಿಲ್ಲೆಗಳ ಪೈಕಿ ಐದರಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಆದರೆ, ಹೈದರಾಬಾದ್ ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಬಂದ್ ಪರಿಣಾಮ ಉಂಟು ಮಾಡಲಿಲ್ಲ. ಪ್ರಾಂತ್ಯದಲ್ಲೆಡೆ ಶೈಕ್ಷಣಿಕ ಸಂಸ್ಥೆಗಳು ಬಾಗಿಲು ಮುಚ್ಚಿದ್ದವು. ವಾರಂಗಲ್, ಮೇದಕ್, ಮೆಹಬೂಬ್‌ನಗರ, ಕರೀಮ್‌ನಗರ ಮತ್ತು ನಿಜಾಮಾಬಾದ್ ಜಿಲ್ಲೆಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು.

ಆಂಧ್ರ ಪ್ರದೇಶ ಸಾರಿಗೆ ಸಂಸ್ಥೆ ತೆಲಂಗಾಣ ಪ್ರಾಂತ್ಯದ ಕೆಲವು ಭಾಗಗಳಲ್ಲಿ ಮಾತ್ರ ಬಸ್ ಸೇವೆ ಮುಂದುವರಿಸಿದೆ. ಅವಳಿ ನಗರಗಳಾದ ಹೈದರಾಬಾದ್ ಮತ್ತು ಸಿಕಂದರಾಬಾದ್‌ನಲ್ಲಿ ಎಂದಿನಂತೆ ಬಸ್‌ಗಳು ಸಂಚರಿಸಿದವು.

ಹಲವು ಜಿಲ್ಲೆಗಳ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಟಿಆರ್‌ಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಟಿಆರ್‌ಎಸ್‌ನ ಕೆಲ ಸಚಿವರನ್ನು ಪೊಲೀಸರು ಗೃಹಬಂಧನ ಮಾಡಿದ್ದರು. ಎಲ್ಲ ರೈಲುಗಳು ನಿಗದಿತ ಸಮಯದಲ್ಲಿ ಸಂಚರಿಸುತ್ತಿವೆ ಎಂದು ದಕ್ಷಿಣ ಮಧ್ಯ ರೈಲ್ವೆ ಮೂಲಗಳು ತಿಳಿಸಿವೆ.

ಟಿಆರ್‌ಎಸ್ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಆರೋಪಿಸಿರುವ ಬಿಜೆಪಿ, ಸಿಪಿಐ ಮತ್ತು ಜೆಎಸಿ ಶನಿವಾರದ ಬಂದ್‌ಗೆ ಬೆಂಬಲಿಸಿಲ್ಲ.

ಶುಕ್ರವಾರ ವಿಧಾನಸಭೆ ಚಲೋ ರ‍್ಯಾಲಿ ನಡೆಸಲು ಮುಂದಾಗಿದ್ದ ತೆಲಂಗಾಣ ಜಂಟಿ ಕ್ರಿಯಾ ಸಮಿತಿಯ ಸಾವಿರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು.

ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಾಹುತಿ
ಪ್ರತ್ಯೇಕ ತೆಲಂಗಾಣ ರಚನೆಗೆ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಎಂಜಿನಿಯರಿಂಗ್ ವಿಭಾಗದಲ್ಲಿ ಓದುತ್ತಿದ್ದ ಬಂಡಾರು ಶ್ರೀನಿವಾಸ ಎಂಬ ವಿದ್ಯಾರ್ಥಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವಿದ್ಯಾರ್ಥಿ ತೆಲಂಗಾಣ ಪ್ರಾಂತ್ಯದ ಮೆಹಬೂಬನಗರ್ ಜಿಲ್ಲೆಗೆ ಸೇರಿದ್ದ.

ತೆಲಂಗಾಣ ರಚನೆಗೆ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ಶ್ರೀನಿವಾಸ ತೀವ್ರ ಖಿನ್ನತೆಗೆ ಒಳಗಾಗಿದ್ದ ಎಂದು ಆತನ ಗೆಳೆಯರು ತಿಳಿಸಿದ್ದಾರೆ. ಶ್ರೀನಿವಾಸ ದೇಹವನ್ನು ಗಾಂಧಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿ ಶವ ಪರೀಕ್ಷೆ ನಡೆಯಲಿದೆ.

ಕಳೆದ ಮೂರು ದಿನಗಳಿಂದ ತೆಲಂಗಾಣ ಪರ ವಿದ್ಯಾರ್ಥಿಗಳು ಮತ್ತು ಪೊಲೀಸರ ಮಧ್ಯೆ ಘರ್ಷಣೆ ಮುಂದುವರಿದಿದ್ದು, ಈ ಘಟನೆಯಿಂದ ವಿ.ವಿ ಆವರಣದಲ್ಲಿ ವಾತಾವರಣ ಮತ್ತಷ್ಟು ಉದ್ರಿಕ್ತಗೊಂಡಿದೆ.

ತೆಲಂಗಾಣ ಹೋರಾಟಕ್ಕಾಗಿ ವಿ.ವಿ ಆವರಣದಲ್ಲಿ ಪ್ರಾಣ ತೆತ್ತ ಮೂರನೇ ವಿದ್ಯಾರ್ಥಿ ಶ್ರೀನಿವಾಸ. ಪ್ರತ್ಯೇಕ ತೆಲಂಗಾಣ ರಚನೆಗೆ ನಡೆಯುತ್ತಿರುವ ಹೋರಾಟದಲ್ಲಿ ಇದುವರೆಗೆ 600 ಜನ ಜೀವ ಕಳೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.