ADVERTISEMENT

ತೆಲಂಗಾಣ: ಬಿಜೆಪಿ ದ್ವಂದ್ವ ಮತ್ತೆ ಬಹಿರಂಗ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ಹೈದರಾಬಾದ್: ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯನ್ನು ಬಿಜೆಪಿ ಬೆಂಬಲಿಸುತ್ತದೆ ಎಂದು ಎಲ್.ಕೆ. ಅಡ್ವಾಣಿ ಹೇಳುವುದರೊಂದಿಗೆ ತೆಲಂಗಾಣ ವಿಚಾರದಲ್ಲಿ ಆ ಪಕ್ಷದ ದ್ವಂದ್ವ ನಿಲುವು ಮತ್ತೆ ಬಹಿರಂಗಗೊಂಡಿದೆ.

ಆಂಧ್ರದಲ್ಲಿ `ಜನಚೇತನ ಯಾತ್ರೆ~ ಎರಡನೇ ದಿನವಾದ ಬುಧವಾರ ಕಾಮರೆಡ್ಡಿಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, `ಕಾಂಗ್ರೆಸ್ ತೆಲಂಗಾಣ ಕುರಿತು ವಹಿಸಿರುವ ಮೌನವನ್ನು ಇನ್ನಾದರೂ ಮುರಿದು ಪ್ರತ್ಯೇಕ ರಾಜ್ಯ ರಚನೆಗೆ ಅಗತ್ಯವಾದ ಮಸೂದೆಯನ್ನು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಬೇಕು~  ಎಂದು ಅವರು ಆಗ್ರಹಿಸಿದರು.

 `ತೆಲಂಗಾಣ ಜನರ ಕನಸು 2012ರ ಆರಂಭದ ಹೊತ್ತಿಗೆ ಸಾಕಾರಗೊಳ್ಳಬೇಕಾದರೆ ಯುಪಿಎ ಸರ್ಕಾರ ಈ ಕುರಿತು ಗಟ್ಟಿ ನಿರ್ಧಾರ ಕೈಗೊಳ್ಳಬೇಕು~ ಒತ್ತಾಯಿಸಿದರು. ಆದರೆ, ಎನ್‌ಡಿಎ ಅಧಿಕಾರದಲ್ಲಿದ್ದಾಗ (2002) ಗೃಹ ಸಚಿವರಾಗಿದ್ದ ಅಡ್ವಾಣಿ, ತೆಲಂಗಾಣ ರಚನೆಗೆ ವಿರೋಧ ವ್ಯಕ್ತಪಡಿಸಿದ್ದರು.

`ಆರ್ಥಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡೇ ಸಮರ್ಪಕ ಯೋಜನೆಗಳ ಮೂಲಕ ಪ್ರಾದೇಶಿಕ ಅಸಮಾನತೆಗಳನ್ನು ನಿವಾರಿಸಲಾಗುವುದು~ ಎಂದು ಅಡ್ವಾಣಿ ಹೇಳಿದ್ದರು.

ತೆಲಂಗಾಣ ರಚನೆ ವಿಚಾರವಾಗಿ ಸಂಸದ ಅಲೆ ನರೇಂದ್ರ ಅವರಿಗೆ ಏಪ್ರಿಲ್ 2, 2002ರಲ್ಲಿ ಪತ್ರ ಬರೆದಿದ್ದ ಅಡ್ವಾಣಿ, `ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಕುರಿತಂತೆ ಕೇಂದ್ರ ಸರ್ಕಾರದ ಮುಂದೆ  ಯಾವುದೇ ಪ್ರಸ್ತಾವ ಇಲ್ಲ~ ಎಂದೂ ತಿಳಿಸಿದ್ದರು.

ಆದರೆ, ತೆಲುಗು ದೇಶಂ ಪಕ್ಷವು (ಟಿಡಿಪಿ) 2004ರಲ್ಲಿ ಎನ್‌ಡಿಎಯಿಂದ ಹೊರಬಂದ ನಂತರ ತೆಲಂಗಾಣ ರಚನೆಗೆ ಟಿಡಿಪಿಯೇ ಅಡ್ಡಗಾಲು ಎಂದು ಬಿಜೆಪಿ ದೂಷಿಸಿತ್ತು.

`ಪ್ರತ್ಯೇಕ ರಾಜ್ಯ ರಚನೆಗೆ ತೆಲಂಗಾಣದ ಜನತೆ ಮತ್ತು ತನ್ನ 33 ಸಂಸದರ ಸಹಮತವಿಲ್ಲ ಎಂದು ಟಿಡಿಪಿ ಹೇಳಿತ್ತು~ ಎಂದು ಬಿಜೆಪಿ ಆಗ ವಿವರಣೆ ನೀಡಿತ್ತು.

ಅಡ್ವಾಣಿ 2002ರಲ್ಲಿ ಸಂಸದ ನರೇಂದ್ರ ಅವರಿಗೆ ಬರೆದಿದ್ದ ಪತ್ರದಲ್ಲಿ ತೆಲಂಗಾಣ ರಚನೆ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ ಎಂದಿದ್ದರೆ, ಬಿಜೆಪಿ 2004ರಲ್ಲಿ ನೀಡಿದ್ದ ಹೇಳಿಕೆಯಲ್ಲಿ ಟಿಡಿಪಿಯೇ ತೊಡರುಗಾಲು ಎಂಬ ಅಂಶವಿದೆ. ಇದು ತೆಲಂಗಾಣ ಕುರಿತು ಬಿಜೆಪಿಯ ದ್ವಂದ್ವ ನಿಲುವನ್ನು ತೋರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.