ನವದೆಹಲಿ (ಪಿಟಿಐ) : ಆಂಧ್ರ ಪ್ರದೇಶ ಪುನರ್ ರಚನೆ ಮಸೂದೆ –2014ಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶನಿವಾರ ಅಂಕಿತ ಹಾಕುವ ಮೂಲಕ ನೂತನ ತೆಲಂಗಾಣ ರಾಜ್ಯ ರಚನೆಗೆ ಅನುಮೋದಿಸಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರ ರಾಜೀನಾಮೆಯಿಂದ ಆಂಧ್ರದಲ್ಲಿ ತಲೆದೂರಿರುವ ಅರಾಜಕತೆ ನಿವಾರಿಸಲು ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿದೆ.
ಆಂಧ್ರ ವಿಭಜನೆಯಿಂದಾಗಿ ದೇಶದಲ್ಲಿ 29ನೇ ರಾಜ್ಯ ನಿರ್ಮಾಣವಾದಂತಾಗಿದೆ. ವಿಭಜನೆ ಬಳಿಕ ಆಂಧ್ರ ಪ್ರದೇಶಕ್ಕೆ 13 ಜಿಲ್ಲೆಗಳು ಸೇರಲಿದ್ದು, ಹೊಸ ರಾಜ್ಯ ತೆಲಂಗಾಣ ಹೈದರಾಬಾದ್ ನಗರವನ್ನೂ ಸೇರಿದಂತೆ ಒಟ್ಟು 10 ಜಿಲ್ಲೆಗಳನ್ನು ಹೊಂದಲಿದೆ.
ಸೀಮಾಂಧ್ರ ಪ್ರದೇಶದ ಬಗ್ಗೆ ಕಾಳಜಿ ತೋರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ವಿಶೇಷ ಸ್ಥಾನಮಾನ ಕಲ್ಪಿಸಿದೆ.
ಲೋಕಸಭೆಯಲ್ಲಿ ಆಂಧ್ರ ವಿಭಜನೆ ಮಸೂದೆ ಮಂಡನೆಯಾಗುತ್ತಿದ್ದಂತೆ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಫೆ. 19ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಆಂಧ್ರ ರಾಜ್ಯಪಾಲ ಇ. ಎಸ್. ಎಲ್. ನರಸಿಂಹನ್ ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದರು. ಬಳಿಕ ಸೀಮಾಂಧ್ರ ನಾಯಕರ ತೀವ್ರ ವಿರೋಧದ ನಡುವೆ ಫೆ. 20ರಂದು ಆಂಧ್ರ ಪ್ರದೇಶ ಪುನರ್ ರಚನೆ ಮಸೂದೆಯನ್ನು ಸಂಸತ್ ಅಂಗೀಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.