ADVERTISEMENT

ತೆಲಂಗಾಣ ರಾಜ್ಯ ರಚನೆ ಬಿಕ್ಕಟ್ಟು....

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ನವದೆಹಲಿ, (ಐಎಎನ್‌ಎಸ್):  ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಪ್ರತ್ಯೇಕ ರಾಜ್ಯ ರಚನೆಯ ತೆಲಂಗಾಣ ಚಳವಳಿಯ ಗಾಂಭೀರ್ಯತೆಯ ಅರಿವಿದ್ದು, ಈ ಕಗ್ಗಂಟನ್ನು ಬಗೆಹರಿಸಲು ಇನ್ನಷ್ಟು ಸಮಯಾವಕಾಶ ಬೇಕು ಎಂದು ಕೇಂದ್ರದ ಯುಪಿಎ ಸರ್ಕಾರ ತಿಳಿಸಿದೆ.

`ಚಳವಳಿ ಗಂಭೀರ ಸ್ವರೂಪ ತಾಳಿದೆ ಎಂಬುದು ಗೊತ್ತು. ನಾವು ಈ ಬಗ್ಗೆ ಸಮಾಲೋಚನೆಗಳನ್ನು ನಡೆಸುತ್ತಿದ್ದೇವೆ ಮತ್ತು ಸಮಸ್ಯೆ ಬಗೆಹರಿಸಲು ಇನ್ನಷ್ಟು ಕಾಲಾವಕಾಶ ಬೇಕು~ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪ್ರಮುಖರ ಸಮಿತಿಯು ಶುಕ್ರವಾರ ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿತ್ತು. ಶನಿವಾರ ಕೂಡ ಸಭೆ ನಡೆಯಿತು ಎಂದು ಅವರು ತಿಳಿಸಿದ್ದಾರೆ.

ತೆಲಂಗಾಣ ಸಮಸ್ಯೆಯ ಬಗ್ಗೆ ಕೇಂದ್ರ ಮತ್ತು ರಾಜ್ಯದ ವಿವಿಧ ಪಕ್ಷಗಳ ನಾಯಕರ ಜತೆ ವಿವರವಾದ ಚರ್ಚೆ ನಡೆಸಿದ ನಂತರವಷ್ಟೇ ಯಾವುದಾದರೂ ನಿರ್ಧಾರ ಅಥವಾ ನಿರ್ಣಯ ಕೈಗೊಳ್ಳಲು ಸಾಧ್ಯ. ಆದ್ದರಿಂದ ಇದಕ್ಕೆ ಹೆಚ್ಚಿನ ಕಾಲಾವಕಾಶ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮತ್ತು ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ.

ಆಂಧ್ರದ ಕರಾವಳಿ ಮತ್ತು ರಾಯಲಸೀಮಾ ಜಿಲ್ಲೆಗಳ ಕಾಂಗ್ರೆಸ್ ಮುಖಂಡರು ಪ್ರತ್ಯೇಕ ರಾಜ್ಯ ರಚನೆ ಕೈಬಿಡಲು ಭಾರಿ ಒತ್ತಡ ಹೇರುತ್ತಿದ್ದಾರೆ. ಮತ್ತೊಂದೆಡೆ ತೆಲಂಗಾಣ ಪ್ರದೇಶದ ಕಾಂಗ್ರೆಸ್ ಮುಖಂಡರು ದೆಹಲಿಯಲ್ಲಿ ವಾಸ್ತವ್ಯ ಹೂಡಿ ಒಂದೇ ಸಮನೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ವರಿಷ್ಠರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ತೆಲಂಗಾಣ ಪ್ರದೇಶದ ಸಂಸದರು, ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸುತ್ತಿದ್ದರೆ, ಇತರ ಜಿಲ್ಲೆಗಳ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ರಾಜೀನಾಮೆ: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಘೋಷಣೆಗೆ ಸೆಪ್ಟೆಂಬರ್ 30ರ ಗಡುವು ನೀಡಿದ್ದ ಆಂಧ್ರಪ್ರದೇಶದ ಮೂಲಸೌಕರ್ಯ ಮತ್ತು ಹೂಡಿಕೆ ಖಾತೆಯ ಸಚಿವ ಕೊಮಟಿರೆಡ್ಡಿ ವೆಂಕಟರೆಡ್ಡಿ, ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಅವನ್ನು ಭೇಟಿ ಮಾಡಿದ ರೆಡ್ಡಿ ರಾಜೀನಾಮೆ ಪತ್ರ ಸಲ್ಲಿಸಿದರು.  ನಂತರ ಅವರು ವಿಧಾನ ಸಭೆ ಕಾರ್ಯದರ್ಶಿ ರಾಜಾ ಸದಾರಾಂ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.