ADVERTISEMENT

ತೆಲಂಗಾಣ ಸತ್ಯಾಗ್ರಹಿಗಳು ಆಸ್ಪತ್ರೆಗೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST

ವಿಶಾಖಪಟ್ಟಣ (ಪಿಟಿಐ): ರಾಜ್ಯ ಇಬ್ಭಾಗ ವಿರೋಧಿಸಿ ನಾಲ್ಕು ದಿನಗಳಿಂದ ಇಲ್ಲಿಯ ಆಂಧ್ರಪ್ರದೇಶ ವಿಶ್ವವಿದ್ಯಾಲಯ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಕುಳಿತಿದ್ದ ವಿದ್ಯಾರ್ಥಿ ಸಂಘಟನೆಗಳ ನಾಯಕರ ಆರೋಗ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ ಭಾನುವಾರ ಪೊಲೀಸರು ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದರು.  ಇದರಿಂದಾಗಿ ವಿವಿಯ ಆವರಣದಲ್ಲಿ ಕೆಲ ಹೊತ್ತು ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು.

ಉಪವಾಸ ನಿರತ ವಿದ್ಯಾರ್ಥಿಗಳ ಜಂಟಿ ಕ್ರಿಯಾ ಸಮಿತಿ ನಾಯಕರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು, ರಕ್ತದೊತ್ತಡ, ದೇಹದಲ್ಲಿಯ ಸಕ್ಕರೆ ಮತ್ತು ನೀರಿನ ಅಂಶ ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸುವಂತೆ ಸಲಹೆ ಮಾಡಿದರು.

ವೈದ್ಯರ ಸಲಹೆ ಮರೆಗೆ ಪೊಲೀಸರು ಅವರನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಲು ಮುಂದಾದಾಗ ಕೆಲವು ವಿದ್ಯಾರ್ಥಿಗಳು ಪ್ರತಿರೋಧ ಒಡ್ಡಿದರು. ಈ ನಡುವೆ ಆಂಧ್ರ ಇಬ್ಭಾಗ ವಿರೋಧಿಸಿ ವಿಜಯವಾಡದ ಸರ್ಕಾರಿ ನೌಕರರ ಸಂಘ ಇತರ ಸಂಘಟನೆಗಳ ಜತೆಗೂಡಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದೆ.

ಟಿಆರ್‌ಎಸ್ ಅಧಿಕಾರ ಬಂದರೆ ದಲಿತ ಮುಖ್ಯಮಂತ್ರಿ
ಹೈದರಾಬಾದ್(ಐಎಎನ್‌ಎಸ್):
ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಧಿಕಾರಕ್ಕೆ ಬಂದಲ್ಲಿ ನೂತನ ತೆಲಂಗಾಣಕ್ಕೆ ದಲಿತ ಸಮಾಜಕ್ಕೆ ಸೇರಿದವರನ್ನು ಪ್ರಥಮ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಟಿಆರ್‌ಎಸ್‌ನ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಭಾನುವಾರ ಹೇಳಿದರು.

`ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ' ಎಂದೂ ಅವರು  ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ತೆಲಂಗಾಣದಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಶೇ 85ರಷ್ಟು  ಜನರಿದ್ದಾರೆ. ಹಾಗಾಗಿ, ದಲಿತ ಸಮುದಾಯಕ್ಕೆ ಸೇರಿದವರನ್ನೇ ಟಿಆರ್‌ಎಸ್ ತೆಲಂಗಾಣದ ಮೊದಲ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗುವುದು ಎಂದರು.

`ಜನರ ನಿರೀಕ್ಷೆಗೆ ತಕ್ಕಂತೆ ಆಗಬೇಕಾದ ಕೆಲಸಗಳ ಬಗ್ಗೆ ನಿಗಾ ಇಡಲು ರಚಿತವಾಗುವ ತೆಲಂಗಾಣ ರಾಜ್ಯ ಸಲಹಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ನಾನು ಸಿದ್ಧ' ಎಂದು ಅವರು ಇದೇ ವೇಳೆ ಹೇಳಿದರು.

ಅಧಿಕಾರದ ಗದ್ದುಗೆ ಹಿಡಿಯಲು ಟಿಆರ್‌ಎಸ್ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ತೆಲಂಗಾಣ ಪ್ರತ್ಯೇಕ ರಾಜ್ಯ ಅಸ್ತಿತ್ವ ಕುರಿತು ಸಂಸತ್ತಿನಲ್ಲಿ ಮಸೂದೆ ಅಂಗೀಕರಿಸಿದ ನಂತರವೇ, ಈ ಕುರಿತು ಟಿಆರ್‌ಎಸ್ ತನ್ನ ರಾಜಕೀಯ ನಿಲುವು ಪ್ರಕಟಪಡಿಸಲು ಸಾಧ್ಯ ಎಂದು ಅವರು ಉತ್ತರಿಸಿದರು.

ಮಹಿಳಾ ಮೀಸಲಾತಿ ಮಸೂದೆ ಹಾಗೂ ಎಸ್‌ಸಿ, ಎಸ್‌ಟಿ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಇನ್ನೂ ಬಾಕಿ ಉಳಿದಿರುವಾಗ ಪ್ರತ್ಯೇಕ ತೆಲಂಗಾಣ ರಾಜ್ಯ ಮಸೂದೆ ಅಂಗೀಕಾರ ಕುರಿತು ತಮಗೆ ಅನುಮಾನಗಳಿವೆ. ಟಿಆರ್‌ಎಸ್ ಅಧಿಕಾರಕ್ಕೆ ಬಂದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಅಲ್ಪಸಂಖ್ಯಾತರಿಗೆ ಶೇ 12ರಷ್ಟು ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ ಅವರು, ಉರ್ದು ಭಾಷಾಭಿವೃದ್ಧಿ, ವಕ್ಫ್ ಆಸ್ತಿ ಸಂರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.