ADVERTISEMENT

ತೇಜಸ್ವಿ ತಲೆದಂಡ: ಆರ್‌ಜೆಡಿ–ಜೆಡಿಯು ಮುಸುಕಿನ ಗುದ್ದಾಟ

ಪಿಟಿಐ
Published 11 ಜುಲೈ 2017, 19:30 IST
Last Updated 11 ಜುಲೈ 2017, 19:30 IST
ತೇಜಸ್ವಿ ತಲೆದಂಡ: ಆರ್‌ಜೆಡಿ–ಜೆಡಿಯು ಮುಸುಕಿನ ಗುದ್ದಾಟ
ತೇಜಸ್ವಿ ತಲೆದಂಡ: ಆರ್‌ಜೆಡಿ–ಜೆಡಿಯು ಮುಸುಕಿನ ಗುದ್ದಾಟ   

ಪಟ್ನಾ: ‘ಜಮೀನಿಗಾಗಿ ಹೋಟೆಲ್‌ ಗುತ್ತಿಗೆ’ ಹಗರಣದಲ್ಲಿ ಸಿಬಿಐ ಸುಳಿಯಲ್ಲಿ ಸಿಲುಕಿರುವ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ಸಂಬಂಧಿಸಿ ಆರ್‌ಜೆಡಿ ಮತ್ತು ಜೆಡಿಯು ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ.

ಆರೋಪಕ್ಕೆ ಒಳಗಾದವರು ಅದರ ವಿರುದ್ಧದ ಸತ್ಯಾಂಶಗಳನ್ನು ಬಹಿರಂಗಪಡಿಸಬೇಕು ಎಂಬ ಅಭಿಪ್ರಾಯವನ್ನು ಜೆಡಿಯು ವ್ಯಕ್ತಪಡಿಸಿದೆ.
ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಜೆಡಿಯು ಅಧ್ಯಕ್ಷ ಮತ್ತು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು  ತಮಗೆ ಮೈತ್ರಿ ಧರ್ಮ ಪಾಲಿಸುವುದು  ತಿಳಿದಿದೆ.  ಅಷ್ಟೇ ಅಲ್ಲ, ರಾಜಕೀಯ ತ್ಯಾಗದ ಮೂಲಕ ಸವಾಲು ಎದುರಿಸುವುದೂ ಗೊತ್ತು ಎಂದಿದ್ದಾರೆ.
ತತ್ವಗಳಲ್ಲಿ ಯಾವುದೇ ರಾಜಿ ಇಲ್ಲ. ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವುದೇ ಇಲ್ಲ ಎಂದು ನಿತೀಶ್‌ ಅವರು ಸಭೆಯಲ್ಲಿ ಹೇಳಿದ್ದಾರೆ. ಈ ಮೂಲಕ ಆರ್‌ಜೆಡಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ಆದರೆ ತೇಜಸ್ವಿ ಯಾದವ್‌ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂಬುದನ್ನು ಆರ್‌ಜೆಡಿ ಪುನರುಚ್ಚರಿಸಿದೆ. ‘ತೇಜಸ್ವಿ ಯಾವುದೇ ತಪ್ಪು ಮಾಡಿಲ್ಲ’ ಎಂದೂ ಹೇಳಿದೆ.

ADVERTISEMENT

ತೇಜಸ್ವಿ ತಂದೆ, ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ಪಕ್ಷದ ಹಿರಿಯ ಮುಖಂಡರ ಜತೆ ಸಭೆ ನಡೆಸಿದ್ದು, ವಿರೋಧಿಗಳು ಅಥವಾ ಮೈತ್ರಿ ಪಕ್ಷದ ಒತ್ತಡಕ್ಕೆ ಮಣಿಯದಿರುವ ನಿರ್ಧಾರ ಕೈಗೊಳ್ಳಲಾಗಿದೆ. ಮಹಾಮೈತ್ರಿಯ ಭಾಗವಾಗಿರುವ ಕಾಂಗ್ರೆಸ್‌ ಕೂಡ ಆರ್‌ಜೆಡಿಗೆ ಬೆಂಬಲ ನೀಡುವಂತೆ ಕಾಣಿಸುತ್ತಿದೆ.

ಲಾಲು ಅವರು ರೈಲ್ವೆ ಸಚಿವರಾಗಿದ್ದಾಗ ರೈಲ್ವೆಯ ಎರಡು ಹೋಟೆಲುಗಳನ್ನು ಗುತ್ತಿಗೆ ನೀಡುವುದಕ್ಕೆ ಪ್ರತಿಫಲವಾಗಿ ಪಟ್ನಾದಲ್ಲಿ ಮೂರು ಎಕರೆ ಜಮೀನು ಪಡೆದುಕೊಂಡಿದ್ದರು ಎಂಬ ಆರೋಪದ ಪ್ರಕರಣದಲ್ಲಿ ಲಾಲು, ಅವರ ಹೆಂಡತಿ ರಾಬ್ಡಿ ದೇವಿ ಮತ್ತು ತೇಜಸ್ವಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.