ADVERTISEMENT

ತೈಲ ಮಾಫಿಯಾ: ಡಿಜಿಪಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 19:30 IST
Last Updated 27 ಫೆಬ್ರುವರಿ 2011, 19:30 IST

ಮುಂಬೈ (ಪಿಟಿಐ): ಸರ್ಕಾರದ ನಿರ್ಧಾರಗಳು ತೈಲ ಮಾಫಿಯಾವನ್ನು ತಡೆಗಟ್ಟದಂತೆ  ಪೊಲೀಸರ ಕೈಯನ್ನು ಕಟ್ಟಿಹಾಕಿದೆ ಎಂದು ಹೇಳಿಕೆ ನೀಡಿರುವ ಡಿಜಿಪಿ ವಿರುದ್ಧ ರಾಜ್ಯ ಸರ್ಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

‘ಡಿಜಿಪಿ ಡಿ. ಶಿವಾನಂದನ್ ಅವರ ಈ ಹೇಳಿಕೆ ಅಸಂಬದ್ಧ ಮತ್ತು ಅವಿವೇಕದಿಂದ ಕೂಡಿದೆ’ ಎಂದು ಮಹಾರಾಷ್ಟ್ರದ ಆಹಾರ ಪೂರೈಕೆ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಅನಿಲ್ ದೇಶ್‌ಮುಖ್ ಹೇಳಿದ್ದಾರೆ.

‘ತೈಲ ಮಾಫಿಯಾ ದಂಧೆ ನಡೆಸುವ ಸ್ಥಳಗಳ ಮೇಲೆ ಪೊಲೀಸ್ ಇಲಾಖೆಯೊಂದೇ ದಾಳಿ ನಡೆಸುತ್ತಿದ್ದಾಗ ಅನೇಕರ ಮೇಲೆ ಲಂಚ ಕೇಳಿದ ಆರೋಪ ಕೇಳಿಬಂದಿತ್ತು. ಆದ್ದರಿಂದ ಸರ್ಕಾರ 2004ರಲ್ಲಿ ಸುತ್ತೋಲೆಯೊಂದನ್ನು ಹೊರಡಿಸಿ ಪೊಲೀಸ್ ಇಲಾಖೆಯೊಂದೇ ದಾಳಿ ನಡೆಸದಂತೆ ಆದೇಶಿಸಿತ್ತು.

ಆದರೆ 2005ರಲ್ಲಿ ಈ ಸುತ್ತೋಲೆಯನ್ನು ಪರಿಷ್ಕರಿಸಿದ ಸರ್ಕಾರ ತೈಲ ಮಾಫಿಯಾ ನಡೆಸುವವರ ಮೇಲೆ ಪೊಲೀಸ್, ಕಂದಾಯ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಲು ಎಲ್ಲ ಅಧಿಕಾರವನ್ನು ನೀಡಿದೆ’ ಎಂದು ದೇಶ್‌ಮುಖ್ ಶನಿವಾರ ಹೇಳಿದ್ದಾರೆ.

ಕಳೆದ ತಿಂಗಳು ನಾಸಿಕ್ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ್ ಸೋನಾವನೆ ಅವರು ತೈಲ ಮಾಫಿಯಾ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಲು ಹೋದಾಗ ಅವರನ್ನು ಸಜೀವವಾಗಿ ಸುಟ್ಟುಹಾಕಲಾಗಿತ್ತು.
ಈ ಹಿನ್ನೆಲೆಯಲ್ಲಿ ಡಿಜಿಪಿ ಹುದ್ದೆಯಿಂದ ಸೋಮವಾರ ನಿವೃತ್ತರಾಗಲಿರುವ ಶಿವಾನಂದನ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಔರಂಗಾಬಾದ್‌ನಲ್ಲಿ ಬುಧವಾರ ಹೇಳಿಕೆ ನೀಡಿದ್ದ ಶಿವಾನಂದನ್, ಸರ್ಕಾರಿ ಆದೇಶವೊಂದು ತೈಲ ಮಾಫಿಯಾ ನಡೆಸುವವರನ್ನು ಮುಟ್ಟದಂತೆ ಪೊಲೀಸರ ಕೈಯನ್ನು ಕಟ್ಟಿಹಾಕಿದೆ.

ಆದರೆ ಸೋನಾವನೆ ಅವರ ಹತ್ಯೆಯ ಬಳಿಕ ಸರ್ಕಾರ ತೈಲ ಮಾಫಿಯಾ ನಿಯಂತ್ರಿಸುವ ಹೊಣೆಗಾರಿಕೆಯನ್ನು ಪೊಲೀಸರ ತಲೆಗೆ ಕಟ್ಟುತ್ತಿದೆ ಎಂದು ಸರ್ಕಾರವನ್ನು ಮೂದಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.