ADVERTISEMENT

ದಂಪತಿಗೆ `ಶಿಕ್ಷೆ': ನಾರ್ವೆ ತೀರ್ಪು ಇಂದು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST

ಓಸ್ಲೊ (ಪಿಟಿಐ): ವಿಪರೀತ ಚೇಷ್ಟೆ ಮಾಡುತ್ತಿದ್ದ 7 ವರ್ಷದ ಮಗನಿಗೆ `ದೈಹಿಕ ಹಿಂಸೆ' ನೀಡಿದ ಆಪಾದನೆ ಎದುರಿಸುತ್ತಿರುವ ಭಾರತೀಯ ದಂಪತಿಗೆ ವಿಧಿಸಬೇಕಾದ ಶಿಕ್ಷೆ ಬಗ್ಗೆ ಇಲ್ಲಿನ ನ್ಯಾಯಾಲಯ ಮಂಗಳವಾರ ತೀರ್ಪು ನೀಡಲಿದೆ.

`ಪ್ರಕರಣ ಬಹಳ ಗಂಭೀರವಾಗಿದ್ದು, ದಂಪತಿಯ ಬಂಧನ ಸಮರ್ಥನೀಯ. ಮಗುವಿಗೆ ಪದೇ ಪದೇ ಬೆದರಿಸಲಾಗಿದೆ ಮತ್ತು ಕಿರುಕುಳ ನೀಡಲಾಗಿದೆ. ನಾರ್ವೆ ದೇಶದ ಕಾನೂನಿನ ಕಲಂ 219ರ ಪ್ರಕಾರ ಇದೊಂದು ತೀವ್ರ ಸ್ವರೂಪದ ಅಪರಾಧ' ಎಂದು ಸರ್ಕಾರಿ ವಕೀಲರು ಕೋರ್ಟ್‌ಗೆ ತಿಳಿಸಿದರು.

`ಮಗುವಿನ ಮೈಮೇಲೆ ಬರೆ ಹಾಕಿದ ಗಾಯ ಹಾಗೂ ಬೆಲ್ಟಿನಿಂದ ಹೊಡೆದ ಬಾಸುಂಡೆಗಳು ಇವೆ. ಆದ್ದರಿಂದ ಆಂಧ್ರಪ್ರದೇಶ ಮೂಲದ ಚಂದ್ರಶೇಖರ್ ವಲ್ಲಭನೇನಿ ಮತ್ತು ಅವರ ಪತ್ನಿ ಅನುಪಮಾ ಅವರನ್ನು ಬಂಧಿಸಲಾಗಿದೆ' ಎಂದು ಸರ್ಕಾರಿ ವಕೀಲ ಕುರ್ತ್ ಲಿರ್ ವಿವರಿಸಿದರು.

ADVERTISEMENT

`ದಂಪತಿಯನ್ನು ಬಂಧಿಸದಿದ್ದರೆ ಅವರು ಭಾರತಕ್ಕೆ ಪರಾರಿಯಾಗಿ ಶಿಕ್ಷೆಯಿಂದ ಪಾರಾಗಲು ಪ್ರಯತ್ನಿಸುತ್ತಿದ್ದರು. ಸಾಕ್ಷ್ಯಗಳನ್ನು ನಾಶಪಡಿಸುವ, ದೇಶ ಬಿಡುವ ಮತ್ತು ತಪ್ಪನ್ನು ಪುನರಾವರ್ತಿಸುವ ಸಾಧ್ಯತೆಗಳು ಇದ್ದಾಗ ನಾವು ಬಂಧಿಸುತ್ತೇವೆ' ಎಂದು ಅವರು  ಸಮರ್ಥಿಸಿಕೊಂಡರು.

ವಿದೇಶಿಯರಷ್ಟೇ ಅಲ್ಲ ನಾರ್ವೆ ಪ್ರಜೆಗಳು ಸಹ ಇಂತಹ ಕೃತ್ಯಗಳನ್ನು ಆಗಾಗ ಎಸಗುತ್ತಾರೆ ಎಂದ  ಕುರ್ತ್, ಈ ಪ್ರಕರಣದಲ್ಲಿ ತಂದೆಗೆ 18 ತಿಂಗಳು ಮತ್ತು ತಾಯಿಗೆ 15 ತಿಂಗಳು ಜೈಲು ಶಿಕ್ಷೆ ನೀಡಬೇಕು ಎಂಬ ಶಿಫಾರಸು ಮಾಡಲಾಗಿದೆ ಎಂದರು.

ಜೈಲಿನಲ್ಲಿ ಇಟ್ಟಿದ್ದು ತಪ್ಪು: ಭಾರತೀಯ ದಂಪತಿಯನ್ನು ಜೈಲಿನಲ್ಲಿ ಇಟ್ಟಿರುವುದು ತಪ್ಪು ಎಂದು ಅನುಪಮಾ ಅವರ ವಕೀಲೆ ಮಾರ್ಟೆ ಬ್ರೊಟ್ರೊಮ್ ಹೇಳಿದ್ದಾರೆ. ದಂಪತಿಗೆ ಶಿಕ್ಷೆ ವಿಧಿಸಿದರೆ ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದರು.

ಮಗು ಸರಿಯಾಗಿ ವರ್ತಿಸದ ಕಾರಣ ಗದರಿಸಿದ್ದಾರೆ, ಆದರೆ ದೈಹಿಕ ತೊಂದರೆ ಕೊಟ್ಟಿಲ್ಲ. ದಂಪತಿ ಸ್ಥಳೀಯವಾಗಿ ಸಹಾಯ ಪಡೆಯಲು ಯತ್ನಿಸಿದ್ದಾರೆ, ಆದರೆ ಯಾರೂ ಸಹಾಯ ಮಾಡಲಿಲ್ಲ ಎಂದು ಬ್ರೊಟ್ರೊಮ್ ಹೇಳಿದ್ದಾರೆ.

ತನ್ನನ್ನು ತಂದೆ ತಾಯಿ ಭಾರತಕ್ಕೆ ವಾಪಸ್ ಕಳುಹಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಗು ಶಾಲಾ ಶಿಕ್ಷಕಿಯ ಬಳಿ ದೂರಿದ 9 ತಿಂಗಳ ನಂತರ ಪೊಲೀಸರು ಚಂದ್ರಶೇಖರ್ ದಂಪತಿ ವಿರುದ್ಧ ಕ್ರಮ ಜರುಗಿಸಿದ್ದಾರೆ.

ಈ ಮಧ್ಯೆ ಇಡೀ ಪ್ರಕರಣದ ಕೇಂದ್ರ ವಾದ ಈ ಮಗು ಈಗ ಹೈದರಾಬಾದ್‌ನಲ್ಲಿ ಅಜ್ಜನ ಮನೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.