ADVERTISEMENT

ದಯವಿಟ್ಟು ಧೈರ್ಯದಿಂದ ಮಾತನಾಡಿ, ಈ ದೇಶ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 14:35 IST
Last Updated 21 ಏಪ್ರಿಲ್ 2018, 14:35 IST
ದಯವಿಟ್ಟು ಧೈರ್ಯದಿಂದ ಮಾತನಾಡಿ, ಈ ದೇಶ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಿ
ದಯವಿಟ್ಟು ಧೈರ್ಯದಿಂದ ಮಾತನಾಡಿ, ಈ ದೇಶ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಿ   

ಬಿಜೆಪಿಗೆ ಗುಡ್ ಬೈ ಹೇಳುವ ಮುನ್ನ ಬಿಜೆಪಿ ಮುಖಂಡ ಯಶವಂತ ಸಿನ್ಹಾ ಸಂಸದರಿಗೆ ತೆರೆದ ಪತ್ರವೊಂದನ್ನು ಬರೆದಿದ್ದರು. ಆ ಪತ್ರದ ಅನುವಾದ ಇಲ್ಲಿದೆ.

ನಾವೆಲ್ಲರೂ ತುಂಬಾ ಪ್ರಯತ್ನ ಪಟ್ಟು 2014ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೆವು. ನಮ್ಮಲ್ಲಿ ಕೆಲವರು 2004ರಿಂದ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ವಿರುದ್ಧ ಸಂಸತ್‍ನ ಒಳಗೂ ಹೊರಗೂ ಹೋರಾಟ ನಡೆಸಿದ್ದರು. ಆ ಸಮಯದಲ್ಲಿ ಅದರಲ್ಲಿ ಕೆಲವರು ಅವರವರ ರಾಜ್ಯದಲ್ಲಿನ ಅಧಿಕಾರದ ಸುಖ ಅನುಭವಿಸುತ್ತಿದ್ದರು. 2014 ರ ಆ ಗೆಲುವು ದೇಶದ ಇತಿಹಾಸದ ಹೊಸತೊಂದು ಅಧ್ಯಾಯಕ್ಕೆ ನಾಂದಿ ಹಾಡಬಹುದೆಂದು ನಾವು ನಂಬಿದ್ದೆವು. ಪ್ರಧಾನಮಂತ್ರಿ ಮತ್ತು ಅವರ ತಂಡಕ್ಕೆ ಅತೀವ ವಿಶ್ವಾಸದಿಂದಲೇ ಬೆಂಬಲ ನೀಡಿದ್ದೆವು. ಈಗ ಕೇಂದ್ರ ಸರ್ಕಾರ ನಾಲ್ಕು ವರ್ಷ ಪೂರ್ತಿಗೊಳಿಸಿದೆ. 5 ಬಾರಿ ಬಜೆಟ್ ಮಂಡನೆಯಾಗಿದೆ ಅದೆಲ್ಲದರ ಫಲಿತಾಂಶ ಕಾಣಬೇಕಾದ ಸಮಯವಿದು. ಆದರೆ ನಾವು ನಮ್ಮ ದಾರಿಯಿಂದ ವಿಮುಖವಾಗಿದ್ದು ಮತದಾರರು ನಂಬಿಕೆ ಕಳೆದುಕೊಂಡಿರುವುದನ್ನು ನಾವಿಲ್ಲಿ ಕಾಣುತ್ತಿದ್ದೇವೆ.

ಜಗತ್ತಿನಲ್ಲಿ ಅತೀ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ವ್ಯವಸ್ಥೆ ನಮ್ಮದು ಎಂದು ಹೇಳುತ್ತಿದ್ದರೂ ಅದಕ್ಕೆ ತದ್ವಿರುದ್ಧವಾಗಿ, ತೃಪ್ತಿಕರವಲ್ಲದ ರೀತಿಯಲ್ಲಿದೆ ನಮ್ಮ ಆರ್ಥಿಕ ಪರಿಸ್ಥಿತಿ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ವ್ಯವಸ್ಥೆ ಇರುವ ದೇಶದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಬ್ಯಾಂಕುಗಳಲ್ಲಿ ಇಷ್ಟೊಂದು ಬ್ಯಾಂಕ್‌ಗಳ ವಸೂಲಾಗದ ಸಾಲ (ಎನ್‌ಪಿಎ) ಇರುವುದು ಹೇಗೆ ಸಾಧ್ಯ?. ಕ್ಷಿಪ್ರ ಪ್ರಗತಿ ಹೊಂದುತ್ತಿರುವ ದೇಶದಲ್ಲಿ ಈ ರೀತಿ ರೈತರು ಸಂಕಷ್ಟಕ್ಕೀಡಾಗಲ್ಲ. ಸಣ್ಣ ಉದ್ಯಮಗಳು ನೆಲಕಚ್ಚಲ್ಲ, ಉಳಿತಾಯ ಮತ್ತು ಹೂಡಿಕೆ ನಾಲ್ಕು ವರ್ಷಗಳಲ್ಲಿ ದಿಢೀರ್ ಕುಸಿಯುತ್ತಿರಲಿಲ್ಲ.  ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬ್ಯಾಂಕಿಂಗ್ ಹಗರಣಗಳು ಒಂದರ ಹಿಂದೆ ಒಂದರಂತೆ ಬಹಿರಂಗವಾಗುತ್ತಿದೆ. ವಂಚನೆ ಮಾಡಿದ ಭ್ರಷ್ಟರು ದೇಶ ಬಿಟ್ಟು ಹೋಗುವಾಗ ಸರ್ಕಾರ ನಿಸ್ಸಹಾಯಕರಾಗಿ ನೋಡುತ್ತಾ ನಿಂತಿದೆ.

ADVERTISEMENT

ಮಹಿಳೆಯರು ಇಲ್ಲಿ ಸುರಕ್ಷಿತರಾಗಿಲ್ಲ, ಅತ್ಯಾಚಾರ ಎಂಬುದು ಇಲ್ಲಿ ಸರ್ವೇಸಾಮಾನ್ಯ ಘಟನೆಯಾಗಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಅವರ ಪರ ವಹಿಸುತ್ತಿದ್ದೇವೆ. ಇಂಥಾ ಪ್ರಕರಣಗಳಲ್ಲಿ ನಮ್ಮದೇ ಜನರು ಆರೋಪಿಗಳಾಗಿದ್ದಾರೆ. ಅಲ್ಪ ಸಂಖ್ಯಾತರು ಮೂಲೆಗುಂಪಾಗಿದ್ದಾರೆ. ಸಮಾಜದಲ್ಲಿ ದುರ್ಬಲರಾದ ದಲಿತರು ಮತ್ತು ಆದಿವಾಸಿಗಳ ಮೇಲೆ ಈ ಹಿಂದೆ ನಡೆದಿರದಷ್ಟು ಆಕ್ರಮಣಗಳು ಈಗ ನಡೆಯುತ್ತಿದೆ. ಸಂವಿಧಾನ ಅವರಿಗೆ ನೀಡಿದ ಅವಕಾಶಗಳಿಗೂ ಈಗ ಧಕ್ಕೆಯುಂಟಾಗುತ್ತಿದೆ.

ನಮ್ಮ ವಿದೇಶಾಂಗ ನೀತಿ ಎಂಬುದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಪ್ರಧಾನಿ ಪದೇ ಪದೇ ವಿದೇಶ ಪ್ರವಾಸ ಕೈಗೊಂಡು ಅಲ್ಲಿನ  ಉನ್ನತಾಧಿಕಾರಿಗಳನ್ನು ಆಲಿಂಗನ ಮಾಡುವುದಕ್ಕಷ್ಟೇ ಸೀಮಿತವಾಗುತ್ತಿದೆ. ಇದು ಅರ್ಥಶೂನ್ಯವಾದುದು ಮಾತ್ರವಲ್ಲದೆ ಇದೆಲ್ಲವೂ ನಿರರ್ಥಕ. ಇದೆಲ್ಲಾ ನಡೆಯುತ್ತಿರುವಾಗ ನಮ್ಮ ನೆರೆ ರಾಷ್ಟ್ರವಾದ ಚೀನಾ ನಮ್ಮ ನಿರ್ದೇಶನಗಳನ್ನು ತಿರಸ್ಕರಿಸುತ್ತಿದೆ. ಪಾಕಿಸ್ತಾನದ ವಿರುದ್ಧ  ನಮ್ಮ ಧೀರ ಯೋಧರು ನಡೆಸಿದ ನಿರ್ದಿಷ್ಟ ದಾಳಿಯೂ ವಿಫಲವಾಗಿದೆ. ಪಾಕಿಸ್ತಾನ ಈಗಲೂ  ಭಯೋತ್ಪಾದನಾ ಕೃತ್ಯಗಳನ್ನು ನಡೆಸುವಾಗ ನಾವು ಸುಮ್ಮನೆ ಅದನ್ನು ನೋಡುತ್ತಾ ನಿಂತಿದ್ದೇವೆ. ಜಮ್ಮು ಮತ್ತು ಕಾಶ್ಮೀರ ಈಗಲೂ ಉರಿಯುತ್ತಿದೆ. ಮಾವೋವಾದಿ ಉಗ್ರವಾದ ಹಾಗೇಯೇ ಇದೆ. ಸಾಮಾನ್ಯ ವ್ಯಕ್ತಿಯೊಬ್ಬ ಈ ಹಿಂದಿಗಿಂತಲೂ ಹೆಚ್ಚಿನ ಕಷ್ಟಗಳನ್ನು ಅನುಭವಿಸುತ್ತಿದ್ದಾನೆ.

ಕಳೆದ ನಾಲ್ಕು ವರ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಅಪಾಯ ಎದುರಿಸುತ್ತಿದೆ. ಸಂಸದೀಯ ಪಕ್ಷಗಳ ಸಭೆಯಲ್ಲಿಯೂ ಸಂಸದರಿಗೆ ಮಾತನಾಡಲು ಅವಕಾಶ ಸಿಗುವುದಿಲ್ಲ. ಹಳೆ ಕಾಲದಂತೆ ಅವರ ನಿಲುವುಗಳನ್ನು ವ್ಯಕ್ತ ಪಡಿಸಲು ಆಗುತ್ತಿಲ್ಲ. ಪಕ್ಷದ ಬೇರೆ ಸಭೆಗಳಲ್ಲಿಯೂ ಸಂವಹನ ಏಕಮುಖವಾಗುತ್ತಿದೆ. ಅವರು ಮಾತನಾಡುತ್ತಾರೆ, ನೀವು ಕೇಳುತ್ತಿರುತ್ತೀರಿ. ಪ್ರಧಾನಿಯವರು ನಿಮಗ ಸಮಯವನ್ನೇ ನೀಡುತ್ತಿಲ್ಲ. ಪಕ್ಷದ ಕಚೇರಿ ಕಾರ್ಪರೇಟ್ ಕಚೇರಿಯಂತಾಗಿದ್ದು, ಅಲ್ಲಿ ಸಿಇಒ ಅವರನ್ನು ಭೇಟಿಯಾಗುವುದು ಅಸಾಧ್ಯವಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯ ಎದುರಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಸಂಸ್ಥೆಗಳ ಮೇಲೆ ದಾಳಿಯಾಗುತ್ತಿದೆ. ಸಂಸತ್ ಎಂಬುದು ತಮಾಷೆಯಾಗಿ ಪರಿಣಮಿಸಿದೆ. ಬಜೆಟ್ ಮಂಡನೆಗೆ ವಿಪಕ್ಷಗಳು ವಿರೋಧ ವ್ಯಕ್ತ ಪಡಿಸುವಾಗ ಪ್ರಧಾನಿ ಒಂದೇ ಒಂದು ಸಾರಿ ವಿಪಕ್ಷದ ನಾಯಕರೊಡನೆ ಮಾತನಾಡಿ ಪರಿಸ್ಥಿತಿಯನ್ನು ನಿಯಂತ್ರಿಸುವ ಕಾರ್ಯ ಮಾಡಲಿಲ್ಲ. ಪ್ರಮುಖ ಬಜೆಟ್‍ನ ಮೊದಲ ಭಾಗ ಯಾವತ್ತೂ ಚಿಕ್ಕದಾಗಿರುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅಧಿಕಾರದಲ್ಲಿದ್ದ ಕಾಲದಲ್ಲಿ ಸಂಸತ್ ಕಲಾಪಗಳಿಗೆ ವಿಪಕ್ಷಗಳು ಅಡ್ಡಿಪಡಿಸದಂತೆ ಕಠಿಣ ನಿರ್ದೇಶನ ನೀಡುತ್ತಿದ್ದರು. ಹಾಗಾಗಿ ನಾವು ಅವಿಶ್ವಾಸ ಗೊತ್ತುವಳಿ ಸೇರಿದಂತೆ ಇತರ ಚರ್ಚೆಗಳನ್ನು ವಿಪಕ್ಷಗಳ ಬೇಡಿಕೆಯಂತೆ ನಡೆಸಿಕೊಡುತ್ತಿದ್ದೆವು.

ಸುಪ್ರೀಂಕೋರ್ಟ್ ನ ನಾಲ್ವರು ಹಿರಿಯ ನ್ಯಾಯಾಧೀಶರು ನಡೆಸಿದ  ಪತ್ರಿಕಾಗೋಷ್ಠಿ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ನಡೆದ ಅಭೂತಪೂರ್ವ ಘಟನೆಗಳಲ್ಲೊಂದಾಗಿತ್ತು. ಆ ನ್ಯಾಯಾಧೀಶರುಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ ಎಂದು ಹೇಳಿದ್ದರು.
ಇಂದು ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಸಂವಹನ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲಾಗುತ್ತಿದೆ. ವಿಶೇಷವಾಗಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ. ನಮ್ಮ ಪಕ್ಷ ಇದನ್ನೇ ಮಾಡುತ್ತಿದ್ದು, ಇದು ಅಪಾಯಕರವಾದುದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಮ್ಮಲ್ಲಿ ಎಷ್ಟು ಮಂದಿಗೆ ಟಿಕೆಟ್  ಸಿಗುತ್ತದೆ ಎಂಬುದು ನನಗೆ  ಗೊತ್ತಿಲ್ಲ. ಅನುಭವಗಳಿದ್ದರೂ ನಿಮ್ಮಲ್ಲಿ ಅರ್ಧದಷ್ಟು ಮಂದಿಗೆ ಟಿಕೆಟ್ ಸಿಗಲಾರದು. ನಿಮಗೆ ಟಿಕೆಟ್ ಸಿಕ್ಕಿದರೂ ನೀವು ಗೆಲ್ಲುವ ಸಾಧ್ಯತೆಯೂ ಕಡಿಮೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ ಶೇ. 31ರಷ್ಟು ಮತಗಳನ್ನು ಪಡೆದಿತ್ತು. ಶೇ. 69ರಷ್ಟು ಮತ ಅವರ ವಿರುದ್ಧವಾಗಿತ್ತು. ವಿಪಕ್ಷಗಳೆಲ್ಲವೂ ಒಗ್ಗೂಡಿದರೆ ನೀವು ಅವರ ಮುಂದೆ ಏನೂ ಏಲ್ಲ.

ದೇಶಕ್ಕಾಗಿ ನೀವು ಮಾತನಾಡಬೇಕು. ಸರ್ಕಾರ ತಮ್ಮ ಸಮುದಾಯಕ್ಕೆ ನೀಡಿದ ಭರವಸೆಯನ್ನು ಈಡೇರಿಸದಕ್ಕಾಗಿ ಕನಿಷ್ಠ ಪಕ್ಷ ಪರಿಶಿಷ್ಟ ಜಾತಿಯ ಐವರು ಸಂಸದರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ನನಗೆ ಸಂತೋಷವಿದೆ. ಎಲ್ಲ ಸಮಸ್ಯೆಗಳು ನಮಗೆ ಎದುರಾಗುವ ಮುನ್ನ ನಮ್ಮ ನಾಯಕನ ಮುಂದೆ ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳೋಣ. ನೀವು ಮೌನವಾಗಿದ್ದರೆ ಅದು ನೀವು ದೇಶಕ್ಕೆ ಮಾಡುವ ಅನ್ಯಾಯ. ಮುಂದಿನ ಜನಾಂಗ ನಿಮ್ಮನ್ನು  ಎಂದಿಗೂ ಕ್ಷಮಿಸಲಾರದು. ಅಧಿಕಾರದಲ್ಲಿರುವವರನ್ನು ಪ್ರಶ್ನಿಸಿ ದೇಶವನ್ನು ಕಾಪಾಡುವುದು ನಿಮ್ಮ ಕರ್ತವ್ಯವೂ ಹೌದು. ನಾನು ವಿಶೇಷವಾಗಿ ಅಡ್ವಾಣಿಜೀ ಮತ್ತು ಜೋಷಿಜೀಯಲ್ಲಿ ವಿನಂತಿಸುವುದೇನೆಂದರೆ ದಯವಿಟ್ಟು  ದೇಶದ ಹಿತಾಸಕ್ತಿಗಾಗಿ ದನಿಯೆತ್ತಿ.

ಕೆಲವೊಂದು ಸಣ್ಣ ಸಣ್ಣ ಜಯಗಳನ್ನೂ ನಾವು ಗಳಿಸಿದ್ದೀವಿ, ಆದರೆ ದೊಡ್ಡ ಸೋಲುಗಳು ಅವುಗಳೆಲ್ಲವನ್ನೂ ಮರೆ ಮಾಡಿವೆ. ಈ ಎಲ್ಲ ವಿಷಯಗಳ ಬಗ್ಗೆ  ನೀವು ಗಮನಹರಿಸುತ್ತೀರಿ ಎಂಬ ನಂಬಿಕೆಯಿಂದ ನಾನು ಇದನ್ನೆಲ್ಲಾ ಈ ಪತ್ರದಲ್ಲಿ ಬರೆದಿದ್ದೇನೆ. ದಯವಿಟ್ಟು ಧೈರ್ಯದಿಂದ ಮಾತನಾಡಿ ಈ ದೇಶ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಿ.

ಲೇಖಕರು: ಯಶವಂತ ಸಿನ್ಹಾ

ಕೃಪೆ:  ದ ನ್ಯೂ ಇಂಡಿಯನ್  ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣ ಬರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.