
ನವದೆಹಲಿ(ಪಿಟಿಐ): ಗೋ ರಕ್ಷಣೆ ಹೆಸರಿನಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಆಗ್ರಹಿಸಿದ್ದಾರೆ.
ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಯವತಿ ಅವರು, ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ಇಬ್ಬರು ದಲಿತರ ಮೇಲೆ ದೌರ್ಜನ್ಯ ನಡೆದಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದರು.
ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ನರೇಂದ್ರ ಮೋದಿ ಅವರು ಕೇವಲ ನೆಪ ಮಾತ್ರಕ್ಕೆ ಕರುಣೆ ತೋರಿಸುವ ಹೇಳಿಕೆ ನೀಡಿದರೆ ಪ್ರಾಯೋಜನವಿಲ್ಲ. ಈ ಘಟನೆಗಳ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಆಂಧ್ರ ಪ್ರದೇಶದ ಅಮಲಪುರ ಜಿಲ್ಲೆಯ ಜಾನಕಿ ಪೇಟೆಯಲ್ಲಿ ವಿದ್ಯುತ್ ಸ್ವರ್ಶಿಸಿ ಮೃತಪಟ್ಟ ಗೋವಿನ ಚರ್ಮ ಸುಲ್ಲಿಯುತ್ತಿದ ಇಬ್ಬರು ದಲಿತರ ಮೇಲೆ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಶನಿವಾರ ‘ಗೋ ರಕ್ಷಣೆ’ ವಿಚಾರವನ್ನು ಪ್ರಸ್ಥಾಪಿಸಿ ಗೋರಕ್ಷಕರು ಎಂದು ಹೇಳಿಕೊಳ್ಳುತ್ತಿರುವವರಿಂದ ದೇಶದ ವಿವಿಧ ಭಾಗಗಳಲ್ಲಿ ದಲಿತರ ಮೇಲೆ ಹಲ್ಲೆ ನಡೆದಿವೆ. ದಲಿತರ ಮೇಲೆ ದೌರ್ಜನ್ಯ ಎಸಗುವವರಿಗೆ ಹಾಗೆ ಮಾಡಲು ಯಾವ ಹಕ್ಕಿದೆ ಎಂದು ಪ್ರಶ್ನಿಸಿದ ಮೋದಿ, ಸಮಾಜದಲ್ಲಿ ಸಾಮರಸ್ಯ ಕಾಯ್ದುಕೊಳ್ಳುವುದು ಆದ್ಯತೆ ಪಡೆದುಕೊಳ್ಳಬೇಕು ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.