ADVERTISEMENT

ದಲಿತ ಮುಖಂಡರ ಮನೆಗಳಿಗೆ ಬೆಂಕಿ

ಪಿಟಿಐ
Published 3 ಏಪ್ರಿಲ್ 2018, 19:30 IST
Last Updated 3 ಏಪ್ರಿಲ್ 2018, 19:30 IST

ಜೈಪುರ: ಉತ್ತರ ಭಾರತದಾದ್ಯಂತ ದಲಿತ ಸಂಘಟನೆಗಳು ನಡೆಸಿದ ‘ಭಾರತ ಬಂದ್‌’ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಮಧ್ಯಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಗಾಯಗೊಂಡಿದ್ದ ಇಬ್ಬರು ಮಂಗಳವಾರ ಮೃತಪಟ್ಟಿದ್ದಾರೆ. ರಾಜಸ್ಥಾನದಲ್ಲಿ ಮಂಗಳವಾರವೂ ಹಿಂಸಾಕೃತ್ಯಗಳು ವರದಿಯಾಗಿವೆ.

ಆಳಿತಾರೂಢ ಬಿಜೆಪಿ ಶಾಸಕ ರಾಜಕುಮಾರಿ ಜಾಟವ್‌ ಮತ್ತು ಮಾಜಿ ಶಾಸಕ ಕಾಂಗ್ರೆಸ್‌ನ ಭರೋಸಿಲಾಲ್‌ ಜಾಟವ್‌ ಅವರ ಮನೆಗಳಿಗೆ ಸುಮಾರು ಐದು ಸಾವಿರ ಜನರಿದ್ದ ಉದ್ರಿಕ್ತ ಗುಂಪು ಮಂಗಳವಾರ ಬೆಂಕಿ ಹಚ್ಚಿದೆ. ಈ ಇಬ್ಬರೂ ದಲಿತ ಸಮುದಾಯಕ್ಕೆ ಸೇರಿದವರು. ಭರೋಸಿಲಾಲ್‌ ಹಿಂದೆ ಸಚಿವರಾಗಿದ್ದರು. ರಾಜಸ್ಥಾನದ ಕರೌಲಿ ಜಿಲ್ಲೆಯ ಹಿಂಡೌನ್‌ ನಗರದಲ್ಲಿ ಇದು ನಡೆದಿದೆ. ಈ ಪ್ರದೇಶದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಕರ್ಫ್ಯೂ ಹೇರಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಖಂಡಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ‘ಭಾರತ ಬಂದ್‌’ ಸಂದರ್ಭದಲ್ಲಿ ವ್ಯಾಪಕ ಹಿಂಸಾಚಾರ ನಡೆದ ಮರುದಿನವೇ ದಲಿತ ಸಮುದಾಯದ ಇಬ್ಬರು ಮುಖಂಡರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

ADVERTISEMENT

ರಾಜಸ್ಥಾನದ ವಿವಿಧ ಸ್ಥಳಗಳಲ್ಲಿ ಮೇಲ್ಜಾತಿಗಳ ಜನರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ತಮಗೆ ಆಗಿರುವ ಹಾನಿಯನ್ನು ಖಂಡಿಸಿ ಅವರು ಪ್ರತಿಭಟನೆ ನಡೆಸಿದ್ದಾರೆ ಎಂದು ರಾಜಸ್ಥಾನದ ಗೃಹ ಸಚಿವ ಗುಲಾಬ್‌ ಚಂದ್‌ ಕಟಾರಿಯಾ ಹೇಳಿದ್ದಾರೆ.

ಸೋಮವಾರದ ಪ್ರತಿಭಟನೆ ವೇಳೆ ಮೃತಪಟ್ಟ ವ್ಯಕ್ತಿಯೊಬ್ಬರ ಮೃತದೇಹವನ್ನು ಇರಿಸಿಕೊಂಡು ಜನರು ಧರಣಿ ಮಾಡಿದ್ದಾರೆ. ಹಿಂಡೌನ್‌, ಚುರೂ ಮತ್ತು ಗಂಗಾಪುರ ನಗರಗಳಲ್ಲಿ ಪ್ರತಿಭಟನೆ ನಡೆದಿದೆ. ಇಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ.

ಹಿಂಡೌನ್‌ನಲ್ಲಿ ವರ್ತಕರ ಸಂಘಗಳು ಮತ್ತು ಮೇಲ್ಜಾತಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಮೆರವಣಿಗೆ ನಡೆಸಿದ ಈ ಗುಂಪುಗಳು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಜನರು ಬಹುಸಂಖ್ಯೆಯಲ್ಲಿರುವ ಪ್ರದೇಶಗಳಿಗೆ ಪ್ರವೇಶಿಸಲು ಯತ್ನಿಸಿವೆ. ಈ ಗುಂಪುಗಳನ್ನು ಚದುರಿಸಲು ಅಶ್ರುವಾಯು ಶೆಲ್‌ ಸಿಡಿಸಲಾಯಿತು ಮತ್ತು ಲಾಠಿ ಪ್ರಹಾರ ಮಾಡಲಾಯಿತು ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರೀಕ್ಷಕ ಎನ್‌.ಆರ್‌.ಕೆ.ರೆಡ್ಡಿ ಹೇಳಿದ್ದಾರೆ. ಸೋಮವಾರ ರಾತ್ರಿ ಈ ಪ್ರದೇಶದಲ್ಲಿ ಕರ್ಫ್ಯೂ ಹೇರಲಾಗಿತ್ತು.

ಗಂಗಾಪುರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ಮಂಗಳವಾರ ಬೆಳಿಗ್ಗೆ ಸಡಿಲಿಸಲಾಗಿದೆ.

**

ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆದಿದೆಯೇ ಹೊರತು ಸರ್ಕಾರದ ವಿರುದ್ಧ ಅಲ್ಲ. ಪ್ರತಿಭಟನೆಗೆ ಕಾಂಗ್ರೆಸ್‌ ಮತ್ತು ಬಿಎಸ್‌ಪಿ ಕುಮ್ಮಕ್ಕು ನೀಡಿವೆ -         -
- ರಾಮದಾಸ ಆಠವಲೆ, ಕೇಂದ್ರ ಸಾಮಾಜಿಕ ನ್ಯಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.