ADVERTISEMENT

ದಾಖಲೆ ಪತ್ರ ನಿರ್ವಹಣೆಯಲ್ಲಿ ಅವ್ಯವಸ್ಥೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 17:20 IST
Last Updated 1 ಫೆಬ್ರುವರಿ 2011, 17:20 IST

ಬರೇಲಿ (ಪಿಟಿಐ): ಇಂಡೊ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ನೇಮಕಾತಿ ರ್ಯಾಲಿಯಲ್ಲಿ ದಾಖಲೆಪತ್ರಗಳನ್ನು ಪರಿಶೀಲಿಸುವ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ್ದರಿಂದ ರೊಚ್ಚಿಗೆದ್ದ ಸಾವಿ ರಾರು ಉದ್ಯೋಗಾಕಾಂಕ್ಷಿಗಳು ಕಲ್ಲು ತೂರಾಟ ನಡೆಸಿ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ಬುಖಾರಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಐಟಿಬಿಪಿ ಬುಖಾರಾ ಶಿಬಿರದಲ್ಲಿ ಜಮಾಯಿದ್ದ ಸಾವಿರಾರು ಯುವಕರು ತಮ್ಮ ನೇಮಕಾತಿ ಅರ್ಜಿಗಳನ್ನು ಸಲ್ಲಿಸಿ ದೈಹಿಕ ಪರೀಕ್ಷೆಗೆ ಚೀಟಿ ಪಡೆಯಲು ಕಾತರರಾಗಿದ್ದರು.
ಆದರೆ ಅವ್ಯವಸ್ಥೆಯಿಂದಾಗಿ ಅವರ ಅರ್ಜಿಗಳನ್ನು ಸ್ವೀಕರಿಸಲಿಲ್ಲ. ಇದರಿಂದ ಕೆರಳಿದ ಯುವಕರು ರಂಪಾಟ ನಡೆಸಿದರು.

ಉದ್ರಿಕ್ತರು ಏಳು ಬಸ್‌ಗಳಿಗೆ ಬೆಂಕಿ ಹಚ್ಚಿದರು. ಅದರಲ್ಲಿ ಐದು ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸುಗಳಾಗಿದ್ದವು. ಜತೆಗೆ ಒಂದು ಪೆಟ್ರೋಲ್ ಪಂಪ್ ಮತ್ತು ಹಲವು ದ್ವಿಚಕ್ರ ವಾಹನಗಳಿಗೂ ಬೆಂಕಿ ಹಚ್ಚಲಾಯಿತು. ಕಲ್ಲು ತೂರಾಟದಲ್ಲಿ ನಿರತರಾದ ಯುವಕರು ಆಕಾಶವಾಣಿ ಮತ್ತು ದೂರದರ್ಶನ ಕಚೇರಿಗಳ ಮೇಲೂ ಕಲ್ಲು ಎಸೆದರು.
ಜಿಲ್ಲಾಧಿಕಾರಿ ಅನಿಲ್ ಗರ್ಗ್ ಸ್ಥಳಕ್ಕೆ ಧಾವಿಸಿದ್ದು, ಉದ್ರಿಕ್ತರನ್ನು ಸಮಾಧಾನಪಡಿಸುವ ಕಾರ್ಯ ನಡೆದಿದೆ.

ಇದೇ ಯುವಕರು ಸೋಮವಾರ ರಾತ್ರಿ ಸ್ಥಳೀಯ ರೈತರೊಂದಿಗೂ ಸಂಘರ್ಷಕ್ಕೆ ಇಳಿದಿದ್ದರು. ಅವರ ಹೊಲಗಳಲ್ಲಿ ಬೆಳೆದ ಕಬ್ಬು ಕೀಳಬೇಡಿ ಎಂದು ಎಚ್ಚರಿಸಿದ ರೈತರೊಂದಿಗೆ ಸಂಘರ್ಷಕ್ಕೆ ಇಳಿದಾಗ ರೈತರು ಪ್ರತಿಯಾಗಿ ಗುಂಡು ಹಾರಿಸಿದ್ದರು. ಇದನ್ನು ಪ್ರತಿಭಟಿಸಿ ಕಬ್ಬಿನ ಗದ್ದೆಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದರು.

ರೈಲಿನ ಮೇಲ್ಗಡೆ ಪ್ರಯಾಣ; ಸಾವು

ಐಟಿಬಿಪಿ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಂಡು ರೈಲಿನ ಛಾವಣಿಯ ಮೇಲ್ಭಾಗದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದ ಏಳು ಮಂದಿ ಸೇತುವೆಗೆ ಅಪ್ಪಳಿಸಿ ದಾರುಣವಾಗಿ ಮೃತಪಟ್ಟ ಘಟನೆ ಶಹಜಹಾನಪುರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ 12 ಜನ ಗಾಯಗೊಂಡಿದ್ದಾರೆ.

ಶಹಜಹಾನಪುರ ರೈಲು ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ರೋಜಾ ನಿಲ್ದಾಣದಿಂದ ಹೊರಟ ಹಿಮಗಿರಿ ಎಕ್ಸ್‌ಪ್ರೆಸ್‌ನ ಮೇಲ್ಛಾವಣಿಯ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ಯುವಕರಿಗೆ ಮೇಲುಸೇತುವೆ ಬಡಿದಿದ್ದರಿಂದ ಅವರು ಕೆಳಕ್ಕೆ ಬಿದ್ದು ಸತ್ತಿದ್ದಾರೆ ಎಂದು ಉತ್ತರಪ್ರದೇಶದ ವಿಶೇಷ ಪೊಲೀಸ್ ಮಹಾ ನಿರ್ದೇಶಕ ಬ್ರಜ್ ಲಾಲ್ ತಿಳಿಸಿದ್ದಾರೆ. ಇದರಿಂದ ಉದ್ರಿಕ್ತರಾದ ಐಟಿಬಿಪಿಯ ಇತರ ಉದ್ಯೋಗಾಕಾಂಕ್ಷಿಗಳು ಹಿಂಸಾಕೃತ್ಯಕ್ಕಿಳಿದು ಹಿಮಗಿರಿ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹಚ್ಚಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.