ADVERTISEMENT

ದಿಗ್ವಿಜಯ್ ಸಿಂಗ್ ಪತ್ನಿ ಬಗ್ಗೆ ಪರೋಕ್ಷವಾಗಿ ಅವಹೇಳನಾಕಾರಿ ಹೇಳಿಕೆ ನೀಡಿದ ಬಿಜೆಪಿ ಸಂಸದ

ಏಜೆನ್ಸೀಸ್
Published 14 ಏಪ್ರಿಲ್ 2018, 9:51 IST
Last Updated 14 ಏಪ್ರಿಲ್ 2018, 9:51 IST
ದಿಗ್ವಿಜಯ್ ಸಿಂಗ್ (ಸಂಗ್ರಹ ಚಿತ್ರ)
ದಿಗ್ವಿಜಯ್ ಸಿಂಗ್ (ಸಂಗ್ರಹ ಚಿತ್ರ)   

ಭೋಪಾಲ್‌: ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ಪತ್ನಿ ಅಮೃತಾ ರಾಯ್ ಬಗ್ಗೆ ಮಧ್ಯಪ್ರದೇಶದ ಬಿಜೆಪಿ ಸಂಸದ ಮನೋಹರ್ ಉಂಟ್ವಾಲ್ ಪರೋಕ್ಷವಾಗಿ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ ದೀವಸ್ ಎಂಬ ಕಾರ್ಯಕ್ರದಲ್ಲಿ ಮಾತನಾಡಿದ್ದ ಉಂಟ್ವಾಲ್, ‘ಮಧ್ಯ ಪ್ರದೇಶಕ್ಕೆ ದಿಗ್ವಿಜಯ್ ಸಿಂಗ್ ಏನನ್ನೂ ಮಾಡಿಲ್ಲ. ಆದರೆ, ದೆಹಲಿಯಿಂದ ‘ವಸ್ತು’ವೊಂದನ್ನು ತಂದಿದ್ದಾರೆ. ಅವರು ನರ್ಮದಾ ಯಾತ್ರೆ ಮಾಡಿದ್ದಾರೆ. ಇದೀಗ ಅವರು, ಸಂತರಿಗೇಕೆ ಕೆಂಪು ದೀಪದ ಕಾರು ನೀಡಲಾಗಿದೆ ಎಂದು ಪ್ರಶ್ನಿಸುತ್ತಾರೆ. ಅವರಿಗೆ ಅದರಿಂದ ಸಮಸ್ಯೆಯಿದೆ’ ಎಂದು ಹೇಳಿದ್ದಾರೆ. ಇಲ್ಲಿ ‘ವಸ್ತು’ ಎಂದು ದಿಗ್ವಿಜಯ್ ಅವರ ಪತ್ನಿಯನ್ನೇ ಉಂಟ್ವಾಲ್ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ದಿಗ್ವಿಜಯ್ ಸಿಂಗ್ ಮತ್ತು ಅವರ ಪತ್ನಿ ಅಮೃತಾ ರಾಯ್ ಇತ್ತೀಚೆಗೆ ನರ್ಮದಾ ಯಾತ್ರೆ ಮಾಡಿದ್ದರು. ಮಧ್ಯ ಪ್ರದೇಶ ಸರ್ಕಾರ ವ್ಯಾಪಕ ಭ್ರಷ್ಟಾಚಾರ ಎಸಗಿರುವ ಬಗ್ಗೆ ಯಾತ್ರೆ ವೇಳೆ ದಿಗ್ವಿಜಯ್ ಪುರಾವೆಗಳನ್ನು ಸಂಗ್ರಹಿಸಿದ್ದಾರೆ ಎಂದು ಕಾಂಗ್ರೆಸ್‌ ಇತ್ತೀಚೆಗೆ ಹೇಳಿತ್ತು. 3,200 ಕಿ.ಮೀ. ದೂರದ ನರ್ಮದಾ ಪರಿಕ್ರಮ ಯಾತ್ರೆ ಏಪ್ರಿಲ್ 9ರಂದು ನರಸಿಂಗಪುರ ಜಿಲ್ಲೆಯ ಬರ್ಮನ್ ಘಾಟ್ ಪ್ರದೇಶದಲ್ಲಿ ಕೊನೆಗೊಂಡಿತ್ತು.

ADVERTISEMENT

ಈ ಮಧ್ಯೆ, ದಿಗ್ವಿಜಯ್ ಅವರ ಪತ್ನಿಯನ್ನು ಉಲ್ಲೇಖಿಸಿ ಹೇಳಿಕೆ ನೀಡಿಲ್ಲ ಎಂದು ಉಂಟ್ವಾಲ್ ಸ್ಪಷ್ಟನೆ ನೀಡಿದ್ದಾರೆ. ಯಾತ್ರೆಯನ್ನು ಉದ್ದೇಶಿಸಿ ‘ವಸ್ತು’ ಪದ ಬಳಸಿದ್ದೇನೆ. ಅವರ ರಾಜಕೀಯದ ಬಗ್ಗೆ ಆ ಹೇಳಿಕೆ ನೀಡಿದ್ದೆನೇ ಹೊರತು ಕುಟುಂಬದ ಬಗ್ಗೆ ಅಲ್ಲ. ಆದಾಗ್ಯೂ ಅವರ ಕುಟುಂಬದವರಿಗೆ ನಾನು ನೋವುಂಟುಮಾಡಿದ್ದೇನೆ ಎಂದಾದಲ್ಲಿ ಅವರ ಮನೆಗೆ ತೆರಳಿ ಕ್ಷಮೆ ಕೇಳಲು ಸಿದ್ಧನಿದ್ದೇನೆ’ ಎಂದು ಉಂಟ್ವಾಲ್ ಹೇಳಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.