ADVERTISEMENT

ದುರ್ಗಾಶಕ್ತಿ ವಿರುದ್ಧದ ತನಿಖೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 19:59 IST
Last Updated 24 ಸೆಪ್ಟೆಂಬರ್ 2013, 19:59 IST
ದುರ್ಗಾಶಕ್ತಿ
ದುರ್ಗಾಶಕ್ತಿ   

ಲಖನೌ (ಪಿಟಿಐ): ಐಎಎಸ್‌ ಅಧಿಕಾರಿ ದುರ್ಗಾಶಕ್ತಿ ನಾಗಪಾಲ್‌ ಅವರ ಅಮಾನತು ಆದೇಶ ಹಿಂಪಡೆದ ಎರಡು ದಿನಗಳ ಬೆನ್ನಲ್ಲೇ ಅವರ ವಿರುದ್ಧದ ಇಲಾಖಾ ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರ ಕೈಬಿಟ್ಟಿದೆ.

‘ದುರ್ಗಾಶಕ್ತಿ ಅವರ ಅಮಾನತು ಆದೇಶ ಹಿಂಪಡೆಯಲಾಗಿದೆ. ಹೀಗಾಗಿ ಇಲಾಖಾ ತನಿಖೆ ಮುಂದುವರೆಸು ವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೌತಮ್‌ ಬುದ್ಧ ನಗರದ ಉಪ ವಿಭಾಗಾಧಿಕಾರಿಯಾಗಿದ್ದ ದುರ್ಗಾಶಕ್ತಿ ವಿರುದ್ಧದ ಪ್ರಕರಣದ ತನಿಖೆಯನ್ನು ರಾಜ್ಯದ ಪ್ರಧಾನ ಕಾರ್ಯದರ್ಶಿ ಆರ್‌.ಎಂ. ಶ್ರೀವಾಸ್ತವ್‌ ಕೈಗೊಂಡಿದ್ದರು.

ಸೆಪ್ಟೆಂಬರ್‌ 22ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರನ್ನು ಭೇಟಿ ಮಾಡಿ ಮಸೀದಿ ಗೋಡೆ ನೆಲಸಮಕ್ಕೆ ಆದೇಶ ನೀಡಿದ್ದರ ಕುರಿತು ವಿವರಣೆ ನೀಡಿದ್ದ ಬಳಿಕ ಅವರ ಅಮಾನತು ಆದೇಶ ಹಿಂಪಡೆಯ ಲಾಗಿತ್ತು. ದುರ್ಗಾ ಅವರನ್ನು ಜುಲೈ 27ರಂದು ಅಮಾನತು ಮಾಡಲಾಗಿತ್ತು.

ದುರ್ಗಾಶಕ್ತಿಗೆ ಅಪಮಾನ, ಬಿಜೆಪಿ ಆರೋಪ
ದುರ್ಗಾಶಕ್ತಿ ಅಮಾನತು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ವಿರುದ್ಧ ಹರಿಹಾಯ್ದಿರುವ ರಾಜ್ಯ ಬಿಜೆಪಿ ಘಟಕ, ವಿನಾಕಾರಣ ಉನ್ನತ ಅಧಿಕಾರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದೆ.

ನಾಗಪಾಲ್‌ ಅವರು ಅಖಿಲೇಶ್‌ ಯಾದವ್‌ ಅವರನ್ನು ಭೇಟಿ ಮಾಡಿದ 24 ಗಂಟೆಯೊಳಗಾಗಿ ಅವರ ಅಮಾನತು ರದ್ದುಪಡಿಸಲಾಯಿತು.  ಮುಖ್ಯಮಂತ್ರಿ ಯವರಲ್ಲಿ ಕ್ಷಮೆಯಾಚಿಸಿರುವುದರಿಂದ ಅವರ ಅಮಾನತು ಆದೇಶ ಹಿಂಪಡೆಯಲಾಯಿತು ಎಂದು ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡಲಾಯಿತು ಎಂದು ಬಿಜೆಪಿ ದೂರಿದೆ.

   ಮುಖ್ಯಮಂತ್ರಿ ಮತ್ತು ನಾಗಪಾಲ್‌ ಅವರ ಮಧ್ಯೆ ನಡೆದ ಸಭೆಯ ವಿವರ ಅವರಿಗೆ ಮಾತ್ರ ಗೊತ್ತು. ಆದರೆ, ಐಎಎಸ್‌ ಅಧಿಕಾರಿ ಕ್ಷಮೆಯಾಚಿಸಿದ್ದಾರೆ ಎಂದು ತಿಳಿಸುವ ಮೂಲಕ ಅವರಿಗೆ ಅಪಮಾನ ಮಾಡಲಾಗಿದೆ ಎಂದು ಬಿಜೆಪಿ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT