ಕಿಶ್ತ್‌ವಾರ್ (ಪಿಟಿಐ): `ನಮ್ಮ ಪುತ್ರನ ವಿರುದ್ಧ ತನಿಖೆ ನಡೆಸಿ, ಒಂದು ವೇಳೆ ಈ ಕೃತ್ಯದಲ್ಲಿ ಭಾಗಿಯಾಗಿರುವುದು ದೃಢಪಟ್ಟರೆ ಆತನನ್ನು ಗಲ್ಲಿಗೇರಿಸಿ~ ಎಂದು ದೆಹಲಿ ಹೈಕೋರ್ಟ್ ಸ್ಫೋಟದ ಹೊಣೆ ಹೊತ್ತ ಇ-ಮೇಲ್ ಕಳುಹಿಸಿ ಬಂಧನಕ್ಕೆ ಒಳಗಾಗಿರುವ ಜಮ್ಮು ಕಾಶ್ಮೀರದ ಯುವಕನ ಪೋಷಕರು ಹೇಳಿದ್ದಾರೆ.
ಆದರೆ ತಮ್ಮ ಪುತ್ರ ಈ ದುಷ್ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಸಹ ಇದೇ ವೇಳೆ ಅವರು ಸಮರ್ಥಿಸಿಕೊಂಡಿದ್ದಾರೆ.
`ನಮ್ಮ ಮಗ ಮುಗ್ಧ, ಈ ಚಟುವಟಿಕೆಗಳಿಗೂ ಆತನಿಗೂ ಸಂಬಂಧ ಇಲ್ಲ~ ಎಂದು ಬಂಧಿತ ಯುವಕ ಶೋಯೆಬ್‌ನ ತಂದೆ ಮುಷ್ತಾಕ್ ಅಹಮದ್ ಶೇಖ್ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಿ.ಎ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಶೋಯೆಬ್‌ನನ್ನು ಕಿಶ್ತ್‌ವಾರ್‌ನ ಕಾಲೇಜೊಂದರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಬಂಧಿಸಿದ್ದರು. ನಂತರ ಇ-ಮೇಲ್ ಕಳುಹಿಸಿದ್ದ ಗ್ಲೋಬಲ್ ಸೈಬರ್ ಕೆಫೆಗೆ ಕರೆದುಕೊಂಡು ಹೋಗಿದ್ದರು. ಸೈಬರ್ ಕೆಫೆಯ ಮಾಲೀಕ ಸೇರಿದಂತೆ ಒಟ್ಟು ಐವರನ್ನು ಬಂಧಿಸಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.