ನವದೆಹಲಿ (ಪಿಟಿಐ): `ರಾಷ್ಟ್ರೀಯ ದೂರಸಂಪರ್ಕ ನೀತಿ- 2012~ರ (ಎನ್‌ಟಿಪಿ-12) `ಒಂದೇ ಸಂಖ್ಯೆ- ಒಂದೇ ರಾಷ್ಟ್ರ~ ಅಡಿಯಲ್ಲಿ ಮೊಬೈಲ್ ರೋಮಿಂಗ್ ಸೌಲಭ್ಯ ನೀತಿ ಬಗ್ಗೆ ಗೃಹ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ.
ಕೇಂದ್ರ ಸಚಿವ ಸಂಪುಟ ಕಳೆದ ವಾರ ಒಪ್ಪಿಗೆ ನೀಡಿರುವ `ಎನ್‌ಟಿಪಿ-12~ ಭದ್ರತೆಯ ಕಾರಣದಿಂದ ದೇಶದ ಕೆಲವು ಪ್ರದೇಶಗಳಿಗೆ ಸೂಕ್ತವಾಗಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.
ಈ ನೀತಿಯಲ್ಲಿ ರೋಮಿಂಗ್ ಶುಲ್ಕ ವಿನಾಯ್ತಿಗೆ ಯಾವುದೇ ತಕರಾರು ಇಲ್ಲ. ಆದರೆ, ಕೆಲವು ಪ್ರದೇಶಗಳಲ್ಲಿ ಭದ್ರತಾ ಕಾರಣಕ್ಕಾಗಿ ರೋಮಿಂಗ್ ಸೌಲಭ್ಯಕ್ಕೆ ಇರುವ ನಿರ್ಬಂಧಗಳನ್ನು ಸಡಿಲಿಸಲಾಗದು ಎಂದು ಗೃಹ ಸಚಿವಾಲಯ ಹೇಳಿದೆ.
ಜಮ್ಮು- ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಪೂರ್ವಪಾವತಿ ಗ್ರಾಹಕರಿಗೆ ರೋಮಿಂಗ್ ಸೌಲಭ್ಯ ನಿರ್ಬಂಧಿಸಲಾಗಿದೆ.
`ಒಂದೇ ಸಂಖ್ಯೆ- ಒಂದೇ ರಾಷ್ಟ್ರ~ ನೀತಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳನ್ನು ಸಂಪರ್ಕಿಸಿ ನಿರ್ಧಾರ ಕೈಗೊಂಡಿರುವ ಬಗ್ಗೆ ಖಾತರಿ ನೀಡುವಂತೆಯೂ ದೂರಸಂಪರ್ಕ ಇಲಾಖೆಯನ್ನು ಗೃಹ ಸಚಿವಾಲಯ ಕೋರಿದೆ.
`ಎನ್‌ಟಿಪಿ-12~ ನೀತಿಯಲ್ಲಿ ಭದ್ರತಾ ಕಾರಣಗಳಿಗೆ ತೊಡಕಾಗುವಂತಹ ಒಂಬತ್ತು ವಿಚಾರಗಳ ಬಗ್ಗೆ ಗೃಹ ಸಚಿವಾಲಯ ಆಕ್ಷೇಪ ಎತ್ತಿದ್ದು, ಇದರಲ್ಲಿ ಅಂತರ್ಜಾಲ ಆಧಾರಿತ ದೂರವಾಣಿ ಸಂವಹನವನ್ನು (ವಿಒಐಪಿ) ಪ್ರಮುಖವಾಗಿ ಪ್ರಸ್ತಾಪಿಸಿದೆ. ವಿಒಐಪಿಯನ್ನು ಸೌಲಭ್ಯವನ್ನು ಜಾರಿಗೆ ತರುವ ಮೊದಲು ಗೃಹ ಸಚಿವಾಲಯ ಮತ್ತು ಕಾನೂನು ಜಾರಿಗೆ ತರುವಂತಹ ಇತರ ಇಲಾಖೆಗಳನ್ನು ಸಂಪರ್ಕಿಸುವಂತೆಯೂ ತಿಳಿಸಿದೆ.
ವಿಒಐಪಿ ವ್ಯವಸ್ಥೆಯಲ್ಲಿ ಕರೆ ಮಾಡುವವರ ಸ್ಥಳ, ಸಮಯವನ್ನು ನಿಖರವಾಗಿ ತಿಳಿಯಲು ಆಗುವುದಿಲ್ಲ. ಆದ್ದರಿಂದ ಇಂತಹ ಸೇವೆ ಒದಗಿಸುವವರು ಈ ಬಗ್ಗೆ ಒಂದು ತಿಂಗಳ ಒಳಗೆ ಮಾರ್ಗೋಪಾಯ ಹುಡುಕುವಂತೆ ಸೂಚಿಸಬೇಕು ಎಂದು ಗೃಹ ಸಚಿವಾಲಯ ಹೇಳಿದೆ.
ದೇಶದ ಗಡಿಯಾಚೆಗೆ ವಿಒಐಪಿ ಸೇವೆಯನ್ನು ಒದಗಿಸುವ ನೋಂದಣಿಯಾಗದ ಅನೇಕ ಸೇವಾ ಸಂಸ್ಥೆಗಳಿವೆ. ಇವನ್ನು ನಿರ್ಬಂಧಿಸುವ ಕುರಿತು ಭದ್ರತಾ ಸಂಸ್ಥೆಗಳು, ದೂರಸಂಪರ್ಕ ಇಲಾಖೆ, ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಮತ್ತು ದೂರಸಂಪರ್ಕ ಸೇವಾ ಕಂಪೆನಿಗಳ ಪ್ರಮುಖರು ಹಲವು ಸುತ್ತಿನ ಮಾತುಕತೆ ನಡೆಸಿದ್ದರೂ, ಯಾವುದೇ ಮಾರ್ಗೋಪಾಯ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.