ADVERTISEMENT

ದೆಹಲಿಯಲ್ಲಿ ಬಿಜ್ಲಿ, ಪಾನಿ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ):  ವಿದ್ಯುತ್ ಮತ್ತು ನೀರಿನ ಶುಲ್ಕ ಏರಿಕೆ ಖಂಡಿಸಿ ಮತ್ತು ಶುಲ್ಕ ಪಾವತಿಸಿದ ಕಾರ್ಮಿಕರ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಕ್ರಮವನ್ನು ವಿರೋಧಿಸಿ ಮತ್ತು ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಶನಿವಾರ `ಬಿಜ್ಲಿ, ಪಾನಿ ಸತ್ಯಾಗ್ರಹ~ (ವಿದ್ಯುತ್, ನೀರಿನ ಸತ್ಯಾಗ್ರಹ) ಆರಂಭಿಸಿದರು.

ಇಲ್ಲಿಯ ತಿಗ್ರಿ ಕಾಲೋನಿಯಲ್ಲಿ ಬೆಳಿಗ್ಗೆ ಸತ್ಯಾಗ್ರಹ ಆರಂಭಿಸಿದ ಕೇಜ್ರಿವಾಲ್ ಹಾಗೂ ಸಂಗಡಿಗರು, ದೆಹಲಿ ಸರ್ಕಾರ ವಿದ್ಯುತ್ ಮತ್ತು ನೀರಿನ ಶುಲ್ಕ ಏರಿಕೆ ಹಿಂದಕ್ಕೆ ಪಡೆಯುವವರೆಗೂ ಶುಲ್ಕ ಪಾವತಿಸದಂತೆ ಮನವಿ ಮಾಡಿದರು.

ಕಾನೂನು ಕ್ರಮದ ಸೂಚನೆ:  ವಿದ್ಯುತ್ ಶುಲ್ಕ ಪಾವತಿಸದ ಕಾರಣಕ್ಕಾಗಿ ಸಂಪರ್ಕ ಕಡಿತಗೊಳಿಸಿದ್ದ ಗ್ರಾಹಕರೊಬ್ಬರ ಮನೆಯ ವಿದ್ಯುತ್ ಸಂಪರ್ಕವನ್ನು ಬಿಜ್ಲಿ, ಪಾನಿ ಸತ್ಯಾಗ್ರಹದ ವೇಳೆ ಅಕ್ರಮವಾಗಿ ಕಲ್ಪಿಸಿದ ಕೇಜ್ರಿವಾಲ್ ವಿರುದ್ಧ ದೆಹಲಿ ಸರ್ಕಾರ ಕಠಿಣ ಕ್ರಮವನ್ನು ತೆಗೆದುಕೊಳ್ಳುವ ಸೂಚನೆ ನೀಡಿದೆ.

ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಮತ್ತು ಕಾನೂನು, ಸುವ್ಯವಸ್ಥೆಗೆ ಭಂಗ ತರುತ್ತಿರುವ ಆರೋಪದ ಮೇಲೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಸಾಧ್ಯತೆ ಇದೆ ಎಂದು ರಾಜ್ಯದ ಇಂಧನ ಸಚಿವ ಹರೂನ್ ಯುಸೂಫ್ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.