ನವದೆಹಲಿ (ಪಿಟಿಐ): ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದ್ದರಿಂದ ರಾಷ್ಟ್ರದ ರಾಜಧಾನಿಯಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಅನಿಶ್ಚಿತತೆ ಎದುರಾಗಿದೆ.
ಒಟ್ಟೂ 70 ಸದಸ್ಯ ಬಲದ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷ 32 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಸರಳ ಬಹುಮತ (36) ಅಗತ್ಯವಿರುವ ಸ್ಥಾನ ಗೆಲ್ಲಲು ಅದಕ್ಕೆ ಸಾಧ್ಯವಾಗಿಲ್ಲ.
ಭ್ರಷ್ಟಾಚಾರ ವಿರೋಧ ಹೋರಾಟದ ಮೂಲಕ ಅಸ್ತಿತ್ವಕ್ಕೆ ಬಂದಿರುವ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಒಟ್ಟು 28 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಅತಿದೊಡ್ಡ ಪಕ್ಷವಾಗಿದೆ.
ದೆಹಲಿಯಲ್ಲಿ ಸತತ ಮೂರು ಬಾರಿ ಅಧಿಕಾರದ ಸವಿ ಅನುಭವಿಸಿದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಕೇವಲ 8 ಸ್ಥಾನಗಳನ್ನು ಗೆಲ್ಲುವ ಮೂಲಕ ಹೀನಾಯ ಸೋಲು ಅನುಭವಿಸಿದೆ.
ಸರ್ಕಾರ ರಚನೆಗೆ ಮನವಿ ಸಲ್ಲಿಸುವುದು ಅಥವಾ ಲೆಫ್ಟಿನೆಂಟ್ ಗೌವರ್ನರ್ ಆಹ್ವಾನಕ್ಕೆ ಕಾಯುವುದು. ಈ ಎರಡು ಆಯ್ಕೆಗಳು ಬಿಜೆಪಿಯ ಮುಂದಿದೆ.
ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳಿಸಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಸರ್ಕಾರ ರಚನೆಗೆ ಬಿಜೆಪಿ ಆಹ್ವಾನ ನೀಡಿ, ಬಹುಮತ ಸಾಬೀತಿಗೆ ಕಾಲಮಿತಿ ನಿಗದಿಗೊಳಿಸುವ ಸಾಧ್ಯತೆ ಇದೆ.
ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷದ ನೆರವು ಪಡೆಯದೇ ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಸಾಬೀತು ಪಡಿಸುವುದು ಅಸಾಧ್ಯವಾಗಲಿದೆ.
‘ಬಹುಮತದ ಸಂಖ್ಯೆ (36)ಗಳಿಸಲು ನಾವು ಯಾವುದೇ ರೀತಿಯ ವಾಮ ಮಾರ್ಗಗಳನ್ನು ಅನುಸರಿಸುವುದಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ಆದ್ಯತೆ ನೀಡುತ್ತೇವೆ’ ಎಂದು ಬಿಜೆಪಿ ದೆಹಲಿ ಬಿಜೆಪಿ ಅಧ್ಯಕ್ಷ ವಿಜಯ ಗೊಯಲ್ ಹೇಳಿದ್ದಾರೆ.
‘ಸಹಜ ಪ್ರಕ್ರಿಯೆಗಳ ಮೂಲಕ ಬೆಂಬಲ ಸಿಕ್ಕರೆ ಸರ್ಕಾರ ರಚಿಸುತ್ತೇವೆ. ಇಲ್ಲದಿದ್ದರೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುತ್ತೇವೆ’ ಎಂದು ಬಿಜೆಪಿ ದೆಹಲಿ ಉಸ್ತುವಾರಿ ನಿತನ್ ಗಡ್ಕರಿ ಅವರು ಹೇಳಿದ್ದಾರೆ.
ಯಾರ ನೆರವೂ ಬಯಸುವುದಿಲ್ಲ: ಕೇಜ್ರಿವಾಲ್
ನವದೆಹಲಿ (ಐಎಎನ್‌ಎಸ್): ‘ರಾಜಕೀಯದ ಪ್ರಾಮಾಣಿಕ ಯುಗ ಪ್ರಾರಂಭವಾಗಿದೆ’ ಎಂದು ಅರವಿಂದ ಕೇಜ್ರಿವಾಲ್ ಭಾನುವಾರ ಮಾಧ್ಯಮದವರಿಗೆ ತಿಳಿಸಿದರು.
ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಹರ್ಷವರ್ಧನ ಅವರನ್ನು ಕೇಜ್ರಿವಾಲ್ ಅಭಿನಂದಿಸಿದ್ದಾರೆ.
‘ಇದು ಪಕ್ಷದ ವಿಜಯವಲ್ಲ. ಜನತೆಯ ವಿಜಯ’ ಎಂದು ಅವರು ಬಣ್ಣಿಸಿದ್ದಾರೆ. ‘ದಾನಿಗಳಿಂದ ಪಾರದರ್ಶಕ ರೀತಿಯಲ್ಲಿ ಸಂಗ್ರಹಿಸಿದ ರೂ. 20 ಕೋಟಿ ಬಜೆಟ್ ಬಳಸಿಕೊಂಡು ಪಕ್ಷ ಚುನಾವಣೆ ಎದುರಿಸಿತು’ ಎಂದು ಕೇಜ್ರಿವಾಲ್ ನುಡಿದರು.
‘ಶೀಲಾ ದೀಕ್ಷಿತ್ ಅವರೊಂದಿಗೆ ವೈಮನಸ್ಸು ಹೊಂದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
‘ನಾವು ಯಾರ ಬೆಂಬಲವನ್ನು ನಿರೀಕ್ಷೆ ಮಾಡುವುದಿಲ್ಲ. ರಚನಾತ್ಮಕ ರೀತಿಯಲ್ಲಿ ವಿರೋಧ ಪಕ್ಷದ ಸ್ಥಾನ ನಿರ್ವಹಿಸುತ್ತೇವೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.