ADVERTISEMENT

ದೆಹಲಿ ಮೇಲೆ ಭಯೋತ್ಪಾದಕರ ಹದ್ದುಗಣ್ಣು: ಚಿದಂಬರಂ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 7:30 IST
Last Updated 7 ಸೆಪ್ಟೆಂಬರ್ 2011, 7:30 IST

ನವದೆಹಲಿ (ಐಎಎನ್ಎಸ್): ಭಾರತದ ರಾಜಧಾನಿಯ ಮೇಲೆ ಭಯೋತ್ಪಾದಕ ಗುಂಪುಗಳು ಹದ್ದುಗಣ್ಣು ಇರಿಸಿವೆ. ದೆಹಲಿ ಹೈಕೋರ್ಟ್ ಹೊರಭಾಗದಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ಭಯೋತ್ಪಾದಕ ಕೃತ್ಯ ಎಂದು ಗೃಹ ಸಚಿವ ಪಿ. ಚಿದಂಬರಂ ಬುಧವಾರ ಹೇಳಿದರು.

ಲೋಕಸಭೆಯಲ್ಲಿ ಬಾಂಬ್ ಸ್ಫೋಟ ಘಟನೆಯ ಬಗ್ಗೆ ಹೇಳಿಕೆ ನೀಡಿದ ಬಳಿಕ ಚಿದಂಬರಂ ಬಾಂಬ್ ಸ್ಫೋಟ ಘಟನೆ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದರು.

ಬಾಂಬ್ ಸ್ಫೋಟದ ಬಗ್ಗೆ ಲೋಕಸಭೆಯಲ್ಲಿ ಹೇಳಿಕೆ ನೀಡಿದ ಚಿದಂಬರಂ ಅವರು ಸ್ಫೋಟದಲ್ಲಿ 9 ಜನ ಮೃತರಾಗಿ, 47 ಮಂದಿ ಗಾಯಗೊಂಡಿದ್ದಾರೆ, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ ಗೃಹ ಸಚಿವರು ದಾಳಿಕೋರರ ಗುರುತು ಅಥವಾ ಸೂಟ್ ಕೇಸ್ ನಲ್ಲಿ ಶಕ್ತಿಶಾಲಿ ಬಾಂಬ್ ಇರಿಸಿದವರ ಗುರುತು ವಿವರ ನೀಡಲಿಲ್ಲ.

ಘಟನೆ ಬಗ್ಗೆ ವಿವಿಧ ಸಂಸ್ಥೆಗಳು ಬಹುಮುಖ ತನಿಖೆ ಆರಂಭಿಸಿವೆ. ಘಟನೆಗೆ ಕಾರಣರಾದವರನ್ನು ತತ್ ಕ್ಷಣಕ್ಕೆ ಗುರುತು ಹಚ್ಚುವುದು ಕಷ್ಟ ಎಂದು ಅವರು ನುಡಿದರು.

ಸಂಸತ್ತಿನ ಖಂಡನೆ: ಅದಕ್ಕೆ ಮುನ್ನ ಸಂಸತ್ತಿನ ಉಭಯ ಸದನಗಳೂ ಬಾಂಬ್ ಸ್ಫೋಟದ ಘಟನೆಯನ್ನು ಖಂಡಿಸಿದವು. ಖಂಡನೆಯ ಬಳಿಕ ಕಲಾಪಗಳನ್ನು ಸ್ವಲ್ಪ ಕಾಲ ಮುಂದೂಡಲಾಯಿತು.

ಪ್ರತಿಪಕ್ಷ ಟೀಕೆ: ಹೈಕೋರ್ಟ್ ಆವರಣದ ಹೊರಭಾಗದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಘಟನೆಗೆ ಸರ್ಕಾರದ ಭದ್ರತಾಲೋಪವೇ ಕಾರಣ ಎಂದು ವಿರೋಧ ಪಕ್ಷಗಳು ಆಪಾದಿಸಿವೆ. ವಿವಿಧ ಪಕ್ಷಗಳ ಧುರೀಣರು ಈ ಬಗ್ಗೆ ಪ್ರತಿಕ್ರಿಯಿಸಿ ಘಟನೆ- ಭದ್ರತಾ ಲೋಪ ಬಗ್ಗೆ ವಿಸ್ತೃತ ತನಿಖೆಗೆ ಆಗ್ರಹಿಸಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಶಂಕರ ಪ್ರಸಾದ್, ಸಿಪಿಐ ನಾಯಕ ಡಿ. ರಾಜಾ, ಗುರುದಾಸ ದಾಸಗುಪ್ತ ಅವರು ಬಾಂಬ್ ಸ್ಫೋಟದ ಬಗ್ಗೆ ಸರ್ಕಾರಕ್ಕೆ ಯಾವುದೇ ಪೂರ್ವಭಾವಿ ಮಾಹಿತಿ ದೊರಕದೇ ಇದ್ದುದು ದುರದೃಷ್ಟಕರ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.