ADVERTISEMENT

ದೆಹಲಿ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ ಅಮರ ಸಿಂಗ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 9:50 IST
Last Updated 3 ಅಕ್ಟೋಬರ್ 2011, 9:50 IST

 ನವದೆಹಲಿ (ಪಿಟಿಐ): ವೋಟಿಗಾಗಿ ನೋಟು ಹಗರಣದಲ್ಲಿ ಬಂಧನಕೊಳ್ಳಗಾಗಿರುವ ಸಂಸದ ಅಮರ ಸಿಂಗ್ ಅವರು ಸೋಮವಾರ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ಸದ್ಯ ದೆಹಲಿಯ ಎಐಐಎಂಎಸ್‌ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಅಮರಸಿಂಗ್ ಅವರು ವೈದ್ಯಕೀಯ ವರದಿ ಆಧಾರದ ಮೇಲೆ ತಮಗೆ ಜಾಮೀನು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಆರೋಗ್ಯ ಪರಿಸ್ಥಿತಿ `ಸಮಗ್ರ ಸುಧಾರಣೆ~ಯಂತೆ ಕಾಣಿಸುತ್ತದೆ. ಆದರೆ ತನ್ನ ಮೂತ್ರಪಿಂಡಗಳಿಗೆ ಸೊಂಕು ತಗುಲಿರುವ ಕಾರಣ ನಿಯಮಿತ ಪರೀಕ್ಷೆಗೆ ಒಳಗಾಗುವ ಅಗತ್ಯವಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಸಿಂಗ್ ಅವರು ಸೆಪ್ಟೆಂಬರ 6 ರಂದು ವೋಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದ ಸಮನ್ಸ್‌ಗೆ ಉತ್ತರಿಸಲು ಸ್ಥಳೀಯ ತೀಸ್ ಹಜಾರಿ ಕೋರ್ಟ್‌ಗೆ ಹಾಜರಾದ ವೇಳೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಅಲ್ಲದೇ, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ `ಅಪಕೀರ್ತಿ~ ಎಸಗುವಂತಹ ಈ ಹಗರಣದಲ್ಲಿ ಸಿಂಗ್ ಅವರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿ ನ್ಯಾಯಾಲಯವು ಸಿಂಗ್ ಅವರು ಸಲ್ಲಿಸಿದ ಮಧ್ಯಂತರ ಹಾಗೂ ನಿಯಮಿತ ಜಾಮೀನು ಅರ್ಜಿಗಳನ್ನು ಸೆಪ್ಟೆಂಬರ್ 28 ರಂದು ತಿರಸ್ಕರಿಸಿತ್ತು.

ಬಂಧನಕೊಳ್ಳಗಾಗಿರುವ ಸಿಂಗ್ ಹಾಗೂ ಬಿಜೆಪಿಯ ಮುಖಂಡರು ಒಳಗೊಂಡಂತೆ ಕೆಲವು ರಾಜಕೀಯ ಕಾರ್ಯಕರ್ತರು ಸೇರಿ ನಡೆಸಿದ ಈ ಹಗರಣವು ಸಂಸತ್ತಿನ ಕಾರ್ಯನಿರ್ವಹಣೆ `ನಾಶ~ದ ಗುರಿಯ ಹೊಂದಿರುವ `ಕಲ್ಪನೆಗೂ ಮೀರಿದ ಕೀಳುತನ~ವೆಂದು ಸ್ಥಳೀಯ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ. 

ತಿಹಾರ್ ಜೈಲಿನಲ್ಲಿದ್ದ ಅಮರಸಿಂಗ್ ಅವರನ್ನು ಸೆಪ್ಟೆಂಬರ್ 12 ರಂದು ವಾಂತಿ ಭೇದಿ ಕಾರಣದಿಂದ ಎಐಐಎಂಎಸ್‌ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ವೇಳೆ ನ್ಯಾಯಾಲಯವು ಅವರಿಗೆ ಸೆಪ್ಟೆಂಬರ್ 15ರ ವರೆಗೆ ಮಂಧ್ಯತರ ಜಾಮೀನು ನೀಡಿತ್ತು. ಇದೀಗ ಪುನಃ ಅವರಿಗೆ ತಿಹಾರ್ ಜೈಲಿಗೆ ಮರಳುವ ಭಯ ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.