ADVERTISEMENT

ದೇವಯಾನಿ ಪ್ರಕರಣ: ಮುಗಿಯದ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 19:30 IST
Last Updated 21 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ):  ರಾಜತಾಂತ್ರಿಕ ಅಧಿ­ಕಾರಿ ದೇವಯಾನಿ ಖೋಬ್ರಾಗಡೆ ಬಂಧನದಿಂದ  ಉದ್ಭವಿಸಿರುವ ರಾಜ­ತಾಂತ್ರಿಕ ಬಿಕ್ಕಟ್ಟನ್ನು ಶಮನಗೊಳಿಸಲು ಭಾರತ ಮತ್ತು ಅಮೆರಿಕ ಕಸರತ್ತು ನಡೆಸಿದ್ದರೂ ಪ್ರಕರಣ ಕಗ್ಗಂಟಾಗಿಯೇ ಮುಂದುವರಿದಿದೆ.

ಉಭಯ ರಾಷ್ಟ್ರಗಳ ನಡುವಿನ ದ್ವಿಪ­ಕ್ಷೀಯ ರಾಜತಾಂತ್ರಿಕ ಸಂಬಂಧವನ್ನು ಪರಸ್ಪರ ಗೌರವಿಸುವ ಮತ್ತು ಕಾಪಾಡಿ­ಕೊಂಡು ಹೋಗುವ ದಿಸೆಯಲ್ಲಿ ಪ್ರಕರ­ಣ­­ವನ್ನು ಅಂತ್ಯಗೊಳಿಸಲು ಯತ್ನಿಸುತ್ತಿ­ರುವು­ದಾಗಿ ಎರಡೂ ರಾಷ್ಟ್ರಗಳು ಹೇಳಿಕೊಂಡಿವೆ. ಆದರೂ, ಮುಸುಕಿನ   ಗುದ್ದಾಟ  ಮುಂದು­ವರಿದಿದೆ.

ರಾಜತಾಂತ್ರಿಕ ರಕ್ಷಣೆ ಒದಗಿಸುವ ಉದ್ದೇಶದಿಂದ ಭಾರತವು ದೇವಯಾನಿ ಅವರನ್ನು ವಿಶ್ವಸಂಸ್ಥೆಗೆ  ವರ್ಗಾಯಿಸಿದೆ.

ತಾರ್ಕಿಕ ಅಂತ್ಯ:  ‘ದೇವಯಾನಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಂಡುಹಿಡಿ­ಯಲು  ಹಲವು ಹಂತಗಳಲ್ಲಿ ರಾಜತಾ­ಂತ್ರಿಕ  ಮಾರ್ಗಗಳ ಮೂಲಕ ಮಾತುಕತೆ ನಡೆಯುತ್ತಿದೆ. ಆದರೆ, ಮಾರ್ಗಗಳಲ್ಲಿ ಅಡೆತಡೆಗಳು ಎದುರಾಗಿವೆ’ ಎಂದು ವಿದೇ­ಶಾಂಗ ವ್ಯವಹಾರಗಳ ಸಚಿವ ಸಲ್ಮಾನ್‌ ಖುರ್ಷಿದ್ ತಿಳಿಸಿದ್ದಾರೆ.

ಭಾರತದೊಂದಿಗೆ ಮಾತುಕತೆ ನಡೆ­ಯು­ತ್ತಿರುವುದಾಗಿ ಅಮೆರಿಕ ವಿದೇ­ಶಾಂಗ ಇಲಾಖೆಯ ವಕ್ತಾರರೂ ಸ್ಪಷ್ಟಪಡಿಸಿದ್ದಾರೆ. ‘ರಾಜತಾಂತ್ರಿಕ ಅಧಿ­ಕಾರಿ­ಯನ್ನು ಬಂಧಿಸುವ ಮೂಲಕ ಅಮೆರಿಕ ನಮ್ಮ ನಂಬುಗೆ ಹುಸಿ­ಗೊಳಿ­ಸಿದೆ.  ಮೈತ್ರಿ ಧರ್ಮ  ಪಾಲಿಸದಿ­ರು­ವುದು ಕಳವಳಕಾರಿ’ ಎಂದಿದ್ದಾರೆ.

ಸೌದಿ ರಾಜಕುಮಾರನ  ಪ್ರಕರಣದ ತಳಕು: ದೇವಯಾನಿ ಪ್ರಕರಣಕ್ಕೆ 1982ರಲ್ಲಿ ನಡೆದ ಸೌದಿ ರಾಜಕು­ಮಾರ ಅಬ್ದುಲ್‌ ಅಜೀಜ್‌ ಪ್ರಕರಣ­ವನ್ನು ಹೋಲಿಕೆ ಮಾಡಲಾಗುತ್ತಿದೆ.

ಫ್ಲಾರಿಡಾದ ಡೇಡ್‌ ಪ್ರಾಂತ್ಯದಲ್ಲಿ ಈಜಿಪ್ಟ್‌ ಮಹಿಳೆಯೊಬ್ಬಳನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಸೌದಿ ರಾಜಕುಮಾರ ಬಂಧಿಸಿಟ್ಟಿದ್ದ. ಆಗ, ಆತನಿಗೆ ರಾಜತಾಂತ್ರಿಕ ರಕ್ಷಣೆ ಅಥವಾ ವಿನಾಯ್ತಿ ಇರಲಿಲ್ಲ. ಮೂರು ವಾರಗಳ ನಂತರ ಸೌದಿ ಆತನಿಗೆ ರಾಜತಾಂತ್ರಿಕ ರಕ್ಷಣೆ ಒದಗಿಸಿತ್ತು.

ಪ್ರಕರಣ ನ್ಯಾಯಾಲಯದ ಮೆಟ್ಟಿ­ಲೇರಿತ್ತು. ರಾಜಕುಮಾರನಿಗೆ ರಾಜ­ತಾಂತ್ರಿಕ ರಕ್ಷಣೆ ಇದೆ ಎಂಬ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿತ್ತು. ಆದರೂ ಅಮೆರಿಕ ಸರ್ಕಾರ ಆಗ ಪೂರ್ವಾ­­ನ್ವಯಗೊಳ್ಳುವಂತೆ  ರಾಜತಾಂತ್ರಿಕ ರಕ್ಷಣೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.