ADVERTISEMENT

ದೇಶದ ರಕ್ಷಣೆಗಾಗಿ ಗಡಿದಾಟಲು ಸಿದ್ಧ: ರಾಜನಾಥ್‌ ಸಿಂಗ್‌

ಏಜೆನ್ಸೀಸ್
Published 17 ಮಾರ್ಚ್ 2018, 10:27 IST
Last Updated 17 ಮಾರ್ಚ್ 2018, 10:27 IST
ದೇಶದ ರಕ್ಷಣೆಗಾಗಿ ಗಡಿದಾಟಲು ಸಿದ್ಧ: ರಾಜನಾಥ್‌ ಸಿಂಗ್‌
ದೇಶದ ರಕ್ಷಣೆಗಾಗಿ ಗಡಿದಾಟಲು ಸಿದ್ಧ: ರಾಜನಾಥ್‌ ಸಿಂಗ್‌   

ನವದೆಹಲಿ: ಜಗತ್ತಿನ ಯಾವುದೇ ಶಕ್ತಿಯೂ ಭಾರತದಿಂದ ಕಾಶ್ಮೀರವನ್ನು ಕಸಿಯಲು ಸಾಧ್ಯವಿಲ್ಲ. ದೇಶದ ಪ್ರಾದೇಶಿಕ ಸಮಗ್ರತೆಗಾಗಿ ಅಗತ್ಯವಾದಲ್ಲಿ  ಭದ್ರತಾ ಪಡೆಗಳು ಗಡಿದಾಟಬಲ್ಲವು ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಶನಿವಾರ ಹೇಳಿದರು.

ಈ ಹಿಂದೆ, ಈಗ ಹಾಗೂ ಮುಂದೆಯೂ ಕಾಶ್ಮೀರ ನಮ್ಮದೇ. ಯಾರೊಬ್ಬರು ಇದನ್ನು ನಮ್ಮಿಂದ ಪಡೆಯಲು ಸಾಧ್ಯವಿಲ್ಲ ಎಂದರು. ಸಿಎನ್‌ಎನ್‌ ನ್ಯೂಸ್‌ 18 ರೈಸಿಂಗ್‌ ಇಂಡಿಯಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತದೊಳಗಿನ ಸುರಕ್ಷತೆಯನ್ನು ಮಾತ್ರ ಗಮನಿಸುವುದಿಲ್ಲ. ಅಗತ್ಯಬಿದ್ದರೆ ದೇಶದ ರಕ್ಷಣೆಗಾಗಿ ಗಡಿದಾಟಲು ಸಿದ್ಧ’ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ದೇಶದ ರಕ್ಷಣೆಯಲ್ಲಿ ಪರಾಕ್ರಮ ತೋರಿರುವ ಭಾರತೀಯ ಸೇನೆಯನ್ನು ಪ್ರಶಂಸಿಸಿದರು.

ADVERTISEMENT

ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳುವುದು ನಮ್ಮ ಆಶಯ. ಆದರೆ, ಪಾಕಿಸ್ತಾನಕ್ಕೆ ಏನಾಗಿದೆ ತಿಳಿಯುತ್ತಿಲ್ಲ. ಸ್ನೇಹಹಸ್ತವನ್ನು ಅವರು ನಿರಾಕರಿಸಿದ್ದಾರೆ. ವಿಶ್ವಸಂಸ್ಥೆ ಭಯೋತ್ಪಾದಕನೆಂದು ಗುರುತಿಸಿರುವ ಹಫೀಜ್‌ ಸಯೀದ್‌ಗೆ ಪಾಕಿಸ್ತಾನ ನ್ಯಾಯಸಮ್ಮತಿ ನೀಡಿದೆ. ಆತ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾಗಿದ್ದು, ಚುನಾವಣೆಗಳಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾನೆ ಎಂದರು.

ಕಾಶ್ಮೀರದ ಮಕ್ಕಳನ್ನು ಮೂಲಭೂತವಾದದ ಕಡೆಗೆ ಸೆಳೆಯಲಾಗುತ್ತಿದೆ. ಮುಗ್ಧ ಕಾಶ್ಮೀರಿ ಯುವಜನತೆಗೆ ಜಿಹಾದ್‌ ಬೋಧಿಸುತ್ತಿರುವವರು ಮೊದಲು ಇಸ್ಲಾಂನಲ್ಲಿ ಜಿಹಾದ್‌ನ ನಿಜವಾದ ಪರಿಕಲ್ಪನೆಯನ್ನು ಗ್ರಹಿಸಲಿ ಎಂದರು. ಕಾಶ್ಮೀರದಲ್ಲಿ ಕಲ್ಲುತೂರಾಟ ಪ್ರಕರಣ, ಭಯೋತ್ಪಾದನೆ ಹಾಗೂ ಮಾವೋವಾದಿಗಳ ವಿರುದ್ಧದ ಹೋರಾಟ ಸೇರಿ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.