ADVERTISEMENT

ದೇಶಪಾಂಡೆ ಕುಟುಂಬಕ್ಕಾಗಿ ವಿಮಾನ ಬದಲು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ನವದೆಹಲಿ: ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್. ವಿ. ದೇಶಪಾಂಡೆ ಮತ್ತು ಅವರ ಕುಟುಂಬದ ಆರು ಮಂದಿ ಸದಸ್ಯರ ಬೆಂಗಳೂರು- ಮಾಲ್ಡೀವ್ಸ್ ಪ್ರವಾಸಕ್ಕಾಗಿ ಆಗಿನ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಏರ್ ಇಂಡಿಯಾದ ದೊಡ್ಡ ವಿಮಾನ ಗೊತ್ತು ಮಾಡಿದ ಪ್ರಕರಣವೀಗ ವಿವಾದ ಹುಟ್ಟುಹಾಕಿದೆ.

2010ರ ಏಪ್ರಿಲ್ 25ರಂದು ಬೆಂಗಳೂರು- ಮಾಲೆ ನಡುವೆ ಮತ್ತು ಮಾಲೆ- ಬೆಂಗಳೂರು ನಡುವೆ ಅದೇ ಏಪ್ರಿಲ್ 28ರಂದು ನಿಗದಿ ಮಾಡಲಾಗಿದ್ದ ಚಿಕ್ಕದಾದ ಏರ್‌ಬಸ್ ಎ- 319 ಬದಲಿಗೆ ಎ- 320 ಓಡಿಸಬೇಕೆಂದು ಸೂಚಿಸುವ ಇ ಮೇಲ್ ಮುಂಬೈ ಕೇಂದ್ರ ಕಚೇರಿಯಿಂದ ಬಂದಿದ್ದಾಗಿ ಮಾಹಿತಿ ಹಕ್ಕಿನಡಿ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರ ಸಿಕ್ಕಿದೆ. ಸಾಮಾನ್ಯವಾಗಿ ಏರ್ ಇಂಡಿಯಾ  ಈ ಮಾರ್ಗದಲ್ಲಿ `ಎಕ್ಸಿಕ್ಯೂಟಿವ್ ಕ್ಲಾಸ್~ನ ಎಂಟು ಹಾಗೂ `ಇಕಾನಮಿ ಕ್ಲಾಸ್~ನ 114 ಸೀಟುಗಳಿರುವ ಎ- 319ವಿಮಾನವನ್ನು ಓಡಿಸುತ್ತದೆ.

ಎ- 310 (ಐಸಿ 965)  ವಿಮಾನದ ಏಳು ಬಿಸಿನೆಸ್ ಕ್ಲಾಸ್ ಸೀಟುಗಳು ಮೊದಲೇ ಕಾಯ್ದಿರಿಸಿದ ಹಿನ್ನೆಲೆಯಲ್ಲಿ ದೇಶಪಾಂಡೆ ಮತ್ತು ಅವರ ಕುಟುಂಬದ ಆರು ಸದಸ್ಯರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ಎ- 320 ವಿಮಾನ ಬದಲಾವಣೆ ಮಾಡಲಾಗಿದೆ. ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಷ್ ಚಂದ್ರ ಅಗರವಾಲ್ ಅವರಿಗೆ ಪ್ರಯಾಣಿಕರ ಪಟ್ಟಿಯನ್ನು ನೀಡಲಾಗಿದೆ.

ADVERTISEMENT

ದೇಶಪಾಂಡೆ ಮತ್ತು ಅವರ ಕುಟುಂಬದ ಸದಸ್ಯರ ಪ್ರಕಾರ ಏಪ್ರಿಲ್ 25ರಂದು ಐಸಿ- 965 ವಿಮಾನದಲ್ಲಿ ಬೆಂಗಳೂರಿನಿಂದ ಮಾಲೆಗೆ ಪ್ರಯಾಣಿಸಿದ್ದರು. ಏಪ್ರಿಲ್ 28ರಂದು ಐ.ಸಿ- 966 ವಿಮಾನದಲ್ಲಿ ಹಿಂತಿರುಗಿದ್ದರು. ಕೇಂದ್ರ ಮಾಹಿತಿ ಆಯೋಗ ನೋಟಿಸ್ ಕೊಟ್ಟ ಬಳಿಕವಷ್ಟೇ ಏರ್ ಇಂಡಿಯಾ ಈ ಮಾಹಿತಿಯನ್ನು ಅರ್ಜಿದಾರರಿಗೆ ಪೂರೈಕೆ ಮಾಡಿದೆ.

ಮಾಹಿತಿ ಹಕ್ಕಿನ ಮಹತ್ವದ ಹಿನ್ನೆಲೆಯಲ್ಲಿ ಪ್ರಯಾಣಿಕರ ವಿವರ ಬಹಿರಂಗಪಡಿಸಲಾಗುತ್ತಿದೆ. ಇದನ್ನು ಸಂಪ್ರದಾಯವೆಂದು ಭಾವಿಸಬಾರದು. ಏರ್ ಇಂಡಿಯಾ ತನ್ನ ವ್ಯವಹಾರದ ದೃಷ್ಟಿಯಿಂದ ಗಣ್ಯ ಪ್ರಯಾಣಿಕರ ವಿವರಗಳನ್ನು ರಹಸ್ಯವಾಗಿಡುತ್ತದೆ. ಇದು ಅವರ ಖಾಸಗಿ ಸಂಗತಿಯೂ ಹೌದು ಎಂದು ಅದು ಹೇಳಿದೆ.
ವಿಮಾನದಲ್ಲಿ ಪ್ರಯಾಣಿಸಿದ ಏಳು ಮಂದಿ ಪ್ರಯಾಣಿಕರಲ್ಲಿ ಆರ್.ವಿ. ದೇಶಪಾಂಡೆ, ರಾಧಾ ದೇಶಪಾಂಡೆ, ಪ್ರಸಾದ್ ದೇಶಪಾಂಡೆ, ಮೇಘನಾ ದೇಶಪಾಂಡೆ, ಮಾಸ್ಟರ್ ಧ್ರುವ, ಅವನಿ ಮತ್ತು ಅವರ ಪತಿ ಪ್ರಶಾಂತ್ ದೇಶಪಾಂಡೆ ಸೇರಿದ್ದಾರೆ.

ವಿಮಾನ ಬದಲಾವಣೆ ಮಾಡಿದ್ದರಿಂದಾಗಿ ಐ.ಸಿ-965 ವಿಮಾನದಲ್ಲಿ ಬಿಸಿನೆಸ್ ಕ್ಲಾಸ್‌ನ ಆರು ಹಾಗೂ ಇಕಾನಮಿ ಕ್ಲಾಸ್‌ನ 47 ಸೀಟುಗಳು ಭರ್ತಿ ಆಗಲಿಲ್ಲ. ಮಾಲೆಯಿಂದ ಬೆಂಗಳೂರಿಗೆ ಬಂದ ಐ.ಸಿ- 966 ವಿಮಾನದಲ್ಲಿ ಎಂಟು ಬಿಸಿನೆಸ್ ಕ್ಲಾಸ್ ಮತ್ತು 52 ಇಕಾನಮಿ ಕ್ಲಾಸ್ ಸೀಟುಗಳು ಖಾಲಿ ಉಳಿದಿದ್ದವು ಎಂದು ಏರ್ ಇಂಡಿಯಾ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.