ADVERTISEMENT

ದೇಶಪಾಂಡೆ ಮಗನಿಗೆ ಟಿಕೆಟ್‌

ಧಾರವಾಡ, ಹಾವೇರಿ ಕಾಂಗ್ರೆಸ್‌ ಪಟ್ಟಿ ಇಂದು?

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ನವದೆಹಲಿ: ರಾಜ್ಯದ ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ ಅವರ ಪುತ್ರ ಪ್ರಶಾಂತ್‌ ದೇಶಪಾಂಡೆ ಅವರಿಗೆ ಉತ್ತರ ಕನ್ನಡ (ಕೆನರಾ) ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಬೆಂಗಳೂರು ಉತ್ತರ ಲೋಕ­ಸಭಾ ಕ್ಷೇತ್ರದಿಂದ ನಿರೀಕ್ಷೆಯಂತೆ ಸಿ. ನಾರಾಯಣ ಸ್ವಾಮಿ ಕಣಕ್ಕಿಳಿಯ­ಲಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶಾಂತ್‌ ಮತ್ತು ನಾರಾಯಣಸ್ವಾಮಿ ಅವರ ಹೆಸರನ್ನು ಪ್ರಕಟಿಸಿದರು. ಕಾಂಗ್ರೆಸ್‌ ಇದುವರೆಗೆ 26 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಧಾರವಾಡ ಹಾಗೂ ಹಾವೇರಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಬೇಕಿದೆ.

ಉತ್ತರ ಕನ್ನಡದ ಟಿಕೆಟ್‌ಗಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್‌, ರಾಜಸ್ತಾನ ರಾಜ್ಯಪಾಲೆ ಮಾರ್ಗರೇಟ್‌ ಆಳ್ವ ಮತ್ತು ಪ್ರಶಾಂತ್‌ ದೇಶಪಾಂಡೆ ಪ್ರಯತ್ನಿಸಿದ್ದರು. ಚುನಾ­ವಣಾ ಸಮಿತಿ ಅಂತಿಮವಾಗಿ ಪ್ರಶಾಂತ್‌ಗೆ ಟಿಕೆಟ್‌ ನೀಡಿದೆ. ಬೆಂಗಳೂರು ಉತ್ತರ ಅಭ್ಯರ್ಥಿ ಆಯ್ಕೆಗೆ ನಡೆದ ಪಕ್ಷದ ಆಂತರಿಕ ಚುನಾವಣೆ­ಯಲ್ಲಿ ನಾರಾಯಣಸ್ವಾಮಿ ಗೆಲುವು ಪಡೆದಿದ್ದರು.

ಧಾರವಾಡದಿಂದ ಶಾಸಕ ವಿನಯ್‌ ಕುಲಕರ್ಣಿ, ಮಾಜಿ ಲೋಕಸಭಾ ಸದಸ್ಯ ಮಂಜುನಾಥ ಕುನ್ನೂರು ಹಾಗೂ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಅವರ ಹೆಸರು ಕೇಳಿಬರುತ್ತಿದೆ. ವಿನಯ್‌ ಕುಲಕರ್ಣಿ ಅವರಿಗೆ ಟಿಕೆಟ್‌ ನೀಡುವ ಕುರಿತು ರಾಜ್ಯ ಕಾಂಗ್ರೆಸ್‌ ಒಲವು ತೋರಿದೆ. ಆದರೆ, ವಿನಯ್‌ ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹಟ ಹಿಡಿದಿದ್ದಾರೆ.

ಹಾವೇರಿ ಲೋಕಸಭೆ ಟಿಕೆಟ್‌ಗಾಗಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ ಅವರ ಸಹೋದರ ಮಾಜಿ ಶಾಸಕ ಡಿ.ಆರ್‌. ಪಾಟೀಲ ಹಾಗೂ ವಿಧಾನಪರಿಷತ್‌ ಮಾಜಿ ಸದಸ್ಯ ಸಲೀಂ ಅಹಮದ್‌ ಪೈಪೋಟಿ ನಡೆಸಿದ್ದಾರೆ. ಇಲ್ಲಿಂದ ಲೋಕಸಭೆ ಮಾಜಿ ಸದಸ್ಯ ಐ.ಜಿ ಸನದಿ ಅವರ ಹೆಸರೂ ಪರಿಶೀಲನೆಯಲ್ಲಿದೆ.

ಇವೆರಡು ಕ್ಷೇತ್ರ­ದಲ್ಲಿ ಒಂದನ್ನು ಅಲ್ಪಸಂಖ್ಯಾತರಿಗೆ ಬಿಟ್ಟುಕೊಡಬೇಕೆಂಬ ಚಿಂತನೆ ಕಾಂಗ್ರೆಸ್‌ ವಲಯದಲ್ಲಿದೆ. ಬುಧವಾರ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ.

ರೇಖಾಗೆ ಬಿಜೆಪಿ ಟಿಕೆಟ್‌
ಬೆಂಗಳೂರು: ಹಾಸನದಿಂದ ಜಿಲ್ಲಾ ಪಂಚಾಯಿತಿ ಸದಸ್ಯೆ ರೇಖಾ ಹುಲಿಯಪ್ಪಗೌಡ ಅವರಿಗೆ ಟಿಕೆಟ್‌ ನೀಡಲು ಬಿಜೆಪಿ ತೀರ್ಮಾನಿಸಿದೆ. ಸಿ.ಎಚ್‌.­ವಿಜಯ­ಶಂಕರ್‌ ಅವರು ಸ್ಪರ್ಧೆಗೆ ನಿರಾಕರಿಸಿರುವ ಕಾರಣ ಇವರ ಹೆಸರನ್ನು ವರಿಷ್ಠ ಮಂಡಳಿಗೆ ಶಿಫಾರಸು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT