ADVERTISEMENT

ನಕಲಿ ನೋಟು: ಪಾಕಿಸ್ತಾನದ ಕೈವಾಡ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಜನವರಿಯಲ್ಲಿ ವಶಪಡಿಸಿಕೊಂಡಿದ್ದ 1.18 ಕೋಟಿ ರೂಪಾಯಿ ಖೋಟಾ ನೋಟುಗಳು ಪಾಕಿಸ್ತಾನದಿಂದ ಬಂದಿದ್ದು, ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಹುನ್ನಾರದಿಂದ ಅಲ್ಲಿನ ಬೇಹುಗಾರಿಕಾ ಸಂಸ್ಥೆ ಹಾಗೂ ನಿಷೇಧಿತ ಲಷ್ಕರ್- ಎ- ತೊಯ್ಬಾ (ಎಲ್‌ಇಟಿ) ಸಂಘಟನೆ ಈ ಕೆಲಸ ಮಾಡಿವೆ ಎಂದು ದೆಹಲಿ ಪೊಲೀಸರು ಕೋರ್ಟ್‌ಗೆ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಪೂರ್ವ ದೆಹಲಿಯ ಡಬ್ರಿ ಎಂಬಲ್ಲಿನ ನಿವಾಸಿಯಾದ ಜೀಶಾನ್ ಖಾನ್, ಉತ್ತರ ಪ್ರದೇಶದ ಆಶ್ ಮೊಹಮ್ಮದ್, ಜಮ್ಮು ಹಾಗೂ ಕಾಶ್ಮೀರದ ಗುಲಾಂ ಅಹ್ಮದ್, ಯಾಕೂಬ್ ಅಲಿ ಮತ್ತು ಮೊಹಮ್ಮದ್ ರಫೀಕ್ ಅವರನ್ನು ಪೊಲೀಸರು ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಹೆಸರಿಸಿದ್ದಾರೆ. ಇವರೆಲ್ಲ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಕಾನಾನನ್ನು ಆರೋಪಪಟ್ಟಿಯಲ್ಲಿ ಶಂಕಿತನೆಂದು ಹೆಸರಿಸಲಾಗಿದೆ. ಭಾರತದಲ್ಲಿ ನಡೆದ ಹಲವಾರು ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದಾನೆ. 

ಇಕ್ಬಾಲ್ ಹಲವಾರು ವರ್ಷಗಳಿಂದ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ದೆಹಲಿ ಪೊಲೀಸ್ ವಿಶೇಷ ಘಟಕ ತಿಳಿಸಿದೆ.

ಎರಡು ಟೆಂಪೊಗಳಲ್ಲಿದ್ದ 33 ಬಟ್ಟೆ ಗಂಟುಗಳಲ್ಲಿ ಅಡಗಿಸಿ ಇಡಲಾಗಿದ್ದ ಈ ನೋಟುಗಳನ್ನು, ಡಬ್ರಿಯಲ್ಲಿನ ಉಗ್ರಾಣವೊಂದರಿಂದ ವಶಕ್ಕೆ ತೆಗೆದುಕೊಳ್ಳಲಾಗಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.