ADVERTISEMENT

ನಕಲಿ ಸಹಿ-ಹಕ್ಕುಚ್ಯುತಿ ಮಂಡನೆ

ಮೋದಿಗೆ ವೀಸಾ ಪ್ರಕರಣ: ಬಿಜೆಪಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 25 ಜುಲೈ 2013, 19:59 IST
Last Updated 25 ಜುಲೈ 2013, 19:59 IST
ನಕಲಿ ಸಹಿ-ಹಕ್ಕುಚ್ಯುತಿ ಮಂಡನೆ
ನಕಲಿ ಸಹಿ-ಹಕ್ಕುಚ್ಯುತಿ ಮಂಡನೆ   

ಸೇಲಂ/ತಮಿಳುನಾಡು (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ವೀಸಾ ನೀಡದಂತೆ ಕೋರಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಬರೆದ ಪತ್ರದಲ್ಲಿ ಸಂಸದರ ನಕಲಿ ಸಹಿ ಮಾಡಿರುವ ಪ್ರಕರಣವನ್ನು ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶದನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಬಿಜೆಪಿ ವಕ್ತಾರ ಪ್ರಕಾಶ ಜಾವಡೇಕರ್ ತಿಳಿಸಿದ್ದಾರೆ.

ಒಟ್ಟು 65 ಸಂಸದರ ಪೈಕಿ ಕೆಲವರ ನಕಲಿ ಸಹಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಕ್ಕು ಚ್ಯುತಿ ಮಂಡಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡವಿದ್ದು, ಈ ಕುರಿತು ತನಿಖೆ ನಡೆಸಬೇಕೆಂದು ಬಿಜೆಪಿ ಬುಧವಾರ ಒತಾಯಿಸಿತ್ತು.

ಸದಸ್ಯರ ವಿರುದ್ಧ ಕಠಿಣ ಕ್ರಮ (ಚೆನ್ನೈ ವರದಿ): ನರೇಂದ್ರ ಮೋದಿ ಅವರಿಗೆ ಅಮೆರಿಕದ ವೀಸಾ ನೀಡಲು ನಿರಾಕರಿಸಿ ಒಬಾಮ ಅವರಿಗೆ ಬರೆದ ಪತ್ರದಲ್ಲಿ ಡಿಎಂಕೆ ಸಂಸತ್ ಸದಸ್ಯರ ಸಹಿ ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಮಂಗಳವಾರ ಹೇಳಿದ್ದಾರೆ.

ಒಬಾಮ ಅವರಿಗೆ ಬರೆದಿರುವ ಪತ್ರದಲ್ಲಿ ಹಲವು ಸಂಸತ್ ಸದಸ್ಯರ ಸಹಿ ಇದ್ದು, ಡಿಎಂಕೆ ಪಕ್ಷದ ಕೆ. ಪಿ ರಾಮಲಿಂಗಂ ಅವರ ಸಹಿ ಕೂಡ ಇದೆ ಎಂಬ ಊಹಾಪೋಹ ಇದೆ. ಒಂದುವೇಳೆ ಅವರು ಸಹಿ ಹಾಕಿರುವುದು ರುಜುವಾತಾದಲ್ಲಿ  ಕ್ರಮ ಜರುಗಿಸಲಾಗುವುದು. ಯಾರೇ ಸಹಿ ಹಾಕಿದರೂ ಅವರು ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಕರಣಾನಿಧಿ ಹೇಳಿದ್ದಾರೆ.

`ಮೋದಿ ಮತ್ತೆ ಅರ್ಜಿ ಸಲ್ಲಿಸಿದರೆ ಪರಿಶೀಲನೆ'
ವಾಷಿಂಗ್ಟನ್ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವೀಸಾ ವಿವಾದ ಕುರಿತಂತೆ ಅಮೆರಿಕ ಕೆಲವು ಸ್ಪಷ್ಟನೆ ನೀಡಿದೆ. `ಅರ್ಜಿದಾರರು ಅಮೆರಿಕಕ್ಕೆ ಬರಲು ನಾವಾಗಿಯೇ ಅನುಮತಿ ನೀಡುವುದಿಲ್ಲ. ಒಂದು ಪಕ್ಷ ಅವರು ವೀಸಾಗೆ ಕೋರಿ ಮತ್ತೆ ಸಲ್ಲಿಸಿದರೆ ಅದನ್ನು ಪರಿಶೀಲಿಸಲಾಗುವುದು' ಎಂದಿದೆ.

`ಮೋದಿ ಒಂದು ವೇಳೆ ಭಾರತದ ಪ್ರಧಾನಿಯಾದರೆ ಆಗಲೂ ವೀಸಾ ನಿರಾಕರಿಸುವ ನೀತಿ ಅನುಸರಿಸಲಾಗುವುದೇ' ಎಂಬ ಸುದ್ದಿಗಾರರ ಪ್ರಶ್ನೆಗೆ ಅಮೆರಿಕದ ವಿದೇಶಾಂಗ ಇಲಾಖೆ ನುಣುಚಿಕೊಳ್ಳುವ ಉತ್ತರ ನೀಡಿದೆ.

`ಮೋದಿ ವೀಸಾಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದೇ ಇದೆ. ಇಂತಹ ಕೋರಿಕೆ ಏನಾದರೂ ಬಂದರೆ ಅದನ್ನು ನಮ್ಮ ವಲಸೆ ಕಾನೂನು ಮತ್ತು ನೀತಿಯಡಿ ಪರಿಶೀಲಿಸಲಾಗುವುದು. ಸದ್ಯ ವೀಸಾ ನಿರಾಕರಣೆಯ ನಮ್ಮ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ವಿದೇಶಾಂಗ ಇಲಾಖೆಯ ವಕ್ತಾರೆ ಜೆನ್ ಪಸಾಕಿ ಗುರುವಾರ ಸ್ಪಷ್ಟಪಡಿಸಿದ್ದಾರೆ.

2002ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡ ನಂತರದ ಗಲಭೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದರೂ ಮುಖ್ಯಮಂತ್ರಿ ನರೇಂದ್ರ ಮೋದಿ ಆ ಬಗ್ಗೆ ಕ್ರಮ ಕೈಗೊಳ್ಳದ ಕಾರಣ ಅವರಿಗೆ ವೀಸಾ ನೀಡಿದಿರುವ ನಿಲುವನ್ನು ಅಮೆರಿಕ ತಳೆದಿದೆ. ಈ ಹಿಂದೆ ಮೋದಿ 2005ರಲ್ಲಿ ವೀಸಾ ಕೊರಿ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕ ತಿರಸ್ಕರಿಸಿತ್ತು.

ಬಿಜೆಪಿ ಒತ್ತಾಯ: ಈ ಮಧ್ಯೆ, ಮೋದಿ ಅವರಿಗೆ ವೀಸಾ ನಿರಾಕರಿಸುವ ನೀತಿ ಮುಂದುವರಿಸಬೇಕೆಂದು ಭಾರತದ 65 ಸಂಸದರು ಅಮೆರಿಕಕ್ಕೆ ಬರೆದಿರುವ ಎರಡು ಪತ್ರಗಳಿಗೆ ತಾವು ಸಹಿ ಹಾಕಿಲ್ಲವೆಂದು ಕೆಲವು ಸಂಸದರು ತಿಳಿಸಿ, ಆ ಸಹಿ ನಕಲಿ ಎಂದಿರುವ ವಿವಾದದ ಬಗ್ಗೆ ತನಿಖೆ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.