ADVERTISEMENT

ನಕ್ಸಲರ ಅಟ್ಟಹಾಸಕ್ಕೆ ಏಳು ಪೊಲೀಸರು ಬಲಿ

ಬೆಂಗಾವಲು ತಂಡದ ವಾಹನ ಛಿದ್ರ

ಪಿಟಿಐ
Published 20 ಮೇ 2018, 19:43 IST
Last Updated 20 ಮೇ 2018, 19:43 IST
ಸ್ಫೋಟ ನಡೆದ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದರು –ಪಿಟಿಐ ಚಿತ್ರ
ಸ್ಫೋಟ ನಡೆದ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದರು –ಪಿಟಿಐ ಚಿತ್ರ   

ರಾಯಪುರ: ಛತ್ತೀಸಗಡದ ದಂತೇವಾಡ ಬಳಿ ಭಾನುವಾರ ಮತ್ತೆ ನಕ್ಸಲೀಯರು ಅಟ್ಟಹಾಸ ಮೆರೆದಿದ್ದು, ಅವರು ಹುದುಗಿಸಿಟ್ಟಿದ್ದ ನೆಲಬಾಂಬ್‌ ಸ್ಫೋಟಕ್ಕೆ ಏಳು ಪೊಲೀಸರು ಬಲಿಯಾಗಿದ್ದಾರೆ.

ದಂತೇವಾಡ ಬಳಿಯ ಚೋಲ್ನಾರ್ ಹಾಗೂ ಕಿರಂದುಲ್‌ ರಸ್ತೆಯಲ್ಲಿ ನಕ್ಸಲೀಯರು ಹುದುಗಿಸಿಟ್ಟಿದ್ದ ಬಾಂಬ್‌ ಸ್ಫೋಟಿಸಿ ವಾಹನದಲ್ಲಿದ್ದ ಜಿಲ್ಲಾ ಸಶಸ್ತ್ರ ಪಡೆ ಐವರು ಸಿಬ್ಬಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೆ ಇನ್ನೊಬ್ಬರು ಏರ್‌ ಆಂಬುಲೆನ್ಸ್‌ನಲ್ಲಿ ರಾಯಪುರಕ್ಕೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನ ಛಿದ್ರಗೊಂಡು ರಸ್ತೆ ಬದಿಯ ಕಾಲುವೆಗೆ ಹಾರಿಬಿದ್ದಿದೆ.

ADVERTISEMENT

ರಸ್ತೆ ನಿರ್ಮಾಣ ಕಾರ್ಯಕ್ಕೆ ಸಾಮಗ್ರಿ ಸಾಗಿಸುತ್ತಿದ್ದ ಟ್ರಕ್‌ಗಳಿಗೆ ಈ ಜಂಟಿ ತಂಡ ಬೆಂಗಾವಲು ಒದಗಿಸುತ್ತಿತ್ತು.

ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ರಾಜ್ಯಕ್ಕೆ ಭೇಟಿ ನೀಡಿದ ಕೆಲವೇ ತಾಸುಗಳ ಮೊದಲು ಈ ಸ್ಫೋಟ ಸಂಭವಿಸಿದೆ.

ಶಸ್ತ್ರಾಸ್ತ್ರ ಲೂಟಿ: ‘ಎರಡು ಎಕೆ–47 ಬಂದೂಕು ಸೇರಿದಂತೆ ಪೊಲೀಸರ ಶಸ್ತ್ರಾಸ್ತ್ರಗಳನ್ನು ನಕ್ಸಲೀಯರು ಲೂಟಿ ಮಾಡಿದ್ದಾರೆ. ದಾಳಿ ಬಳಿಕ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ತೀವ್ರ ಗೊಳಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಗಡಚಿರೋಲಿ, ಒಡಿಶಾದ ಮಲ್ಕನ್‌ಗಿರಿ ಮತ್ತು ಛತ್ತೀಸಗಡದ ಬಿಜಾಪುರದಲ್ಲಿ  ಇತ್ತೀಚೆಗೆ ನಡೆಸಲಾದ ಎನ್‌ಕೌಂಟರ್‌ ಗಳಲ್ಲಿ ಹಲವು ನಕ್ಸಲೀಯರು ಮೃತಪಟ್ಟಿದ್ದರು. ಅದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

**

‘ಹೇಡಿಗಳ ಕೃತ್ಯ’

‘ದಾಳಿ ನಡೆಸಿರುವುದು ಹೇಡಿಗಳ ಕೃತ್ಯ. ಇದು ನಕ್ಸಲೀಯರ ಜನ ವಿರೋಧಿ ಹಾಗೂ ಅಭಿವೃದ್ಧಿ ವಿರೋಧಿ ಮನಸ್ಥಿತಿ ತೋರಿಸುತ್ತದೆ’ ಎಂದು ಮುಖ್ಯಮಂತ್ರಿ ರಮಣ್ ಸಿಂಗ್ ದಾಳಿಯನ್ನು ಖಂಡಿಸಿದ್ದಾರೆ.

‘ಬುಡಕಟ್ಟು ಜನಾಂಗ ಹಾಗೂ ಗ್ರಾಮಸ್ಥರಿಗೆ ರಸ್ತೆಯಂತಹ ಮೂಲಸೌಕರ್ಯ ಕಲ್ಪಿಸುವುದನ್ನು ಸಹ ನಕ್ಸಲೀಯರು ಇಚ್ಛಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

**

ಇಂತಹ ದಾಳಿಗಳಿಂದ ಪೊಲೀಸರು, ಅಧಿಕಾರಿಗಳು ಹಾಗೂ ರಸ್ತೆ ನಿರ್ಮಾಣ ಕಾರ್ಯಗಳಲ್ಲಿ ಪಾಲ್ಗೊಂಡಿರುವ ಕಾರ್ಮಿಕರ ಸ್ಥೈರ್ಯ ಉಡುಗುವುದಿಲ್ಲ.

-ರಮಣ್ ಸಿಂಗ್‌, ಛತ್ತೀಸಗಡ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.