ADVERTISEMENT

ನಕ್ಸಲೀಯರ ದಾಳಿ: 10 ಭದ್ರತಾ ಸಿಬ್ಬಂದಿ ಸಾವು

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 19:30 IST
Last Updated 10 ಜೂನ್ 2011, 19:30 IST

ರಾಯಪುರ:  ಭದ್ರತಾ ಪಡೆಯ ನೆಲಬಾಂಬ್ ನಿರೋಧಕ ವಾಹನವನ್ನು ಪ್ರಬಲವಾಗಿ ಸ್ಫೋಟಿಸಿ, ಬಳಿಕ ಅದರ ಮೇಲೆ ಯದ್ವಾತದ್ವಾ ಗುಂಡಿನ ದಾಳಿ ನಡೆಸಿದ ನಕ್ಸಲೀಯರು, 10 ಸಿಬ್ಬಂದಿಯನ್ನು ಕೊಂದುಹಾಕಿದ ಘಟನೆ ಛತ್ತೀಸ್‌ಗಡದ ದಾಂತೇವಾಡ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

ಸ್ಫೋಟದ ತೀವ್ರತೆಗೆ ವಾಹನವು ಸಾಕಷ್ಟು ಮೇಲಕ್ಕೆ ಎಗರಿ ಬಿದ್ದಿದ್ದು, 7 ವಿಶೇಷ ಪೊಲೀಸ್ ಅಧಿಕಾರಿಗಳು (ಎಸ್‌ಪಿಒ) ಹಾಗೂ ಮೂವರು ಪೊಲೀಸರು ಸ್ಥಳದಲ್ಲೇ ಮೃತರಾಗಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

`ಪೊಲೀಸ್ ಮುಖ್ಯ ಕೇಂದ್ರದಿಂದ ಕಟಿಕಲ್ಯಾಣ್ ಪ್ರದೇಶಕ್ಕೆ ಹೊರಟಿದ್ದ ವಾಹನ ಸೇತುವೆಯ ಮೇಲೆ ಬರುತ್ತಿದ್ದಂತೆಯೇ ನಕ್ಸಲೀಯರು ಈ ಆಕ್ರಮಣ ನಡೆಸಿದ್ದಾರೆ. ಪೊಲೀಸರು ಪ್ರತಿ ದಾಳಿ ನಡೆಸಿದಾಗ ಪರಾರಿಯಾಗಿದ್ದಾರೆ~ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲೀಯರ `ಜನಪಿತೂರಿ~ ವಾರಾಚರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪ್ರತಿ ವರ್ಷದ ಜೂನ್ ಎರಡನೇ ವಾರ ನಡೆಯುವ ಈ ಆಚರಣೆಯ ವೇಳೆ ಅವರು ಸಂಭ್ರಮಾಚರಣೆಯ ಜೊತೆಗೆ ಇಂತಹ ದಾಳಿಗಳನ್ನೂ ನಡೆಸುತ್ತಾರೆ.

ಎರಡು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಬಂಡುಕೋರರು 76 ಸಿಆರ್‌ಪಿಎಫ್ ಯೋಧರನ್ನು ಕೊಂದು ಹಾಕಿದ್ದರು.

ರಾಜ್ಯದಲ್ಲಿ ಈವರೆಗೆ ಪ್ರಸಕ್ತ ವರ್ಷ 30 ಪೊಲೀಸ್ ಸಿಬ್ಬಂದಿ ನಕ್ಸಲೀಯರಿಗೆ ಬಲಿಯಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.