ADVERTISEMENT

ನಕ್ಸಲ್ ನಿಗ್ರಹ: ಆಂಧ್ರ ಮಾದರಿಗೆ ಸಲಹೆ

ನಾಳೆ ಒಂಬತ್ತು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST

ನವದೆಹಲಿ: ನಕ್ಸಲ್ ಪೀಡಿತ ಒಂಬತ್ತು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯು ಬುಧವಾರ ಇಲ್ಲಿ ನಡೆಯಲಿದ್ದು, ನಕ್ಸಲೀಯ ಚಟುವಟಿಕೆಯನ್ನು 81 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಿಗ್ರಹಿಸಿದ ಆಂಧ್ರಪ್ರದೇಶದ ಮಾದರಿಯನ್ನು ಅನುಸರಿಸಲು ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸಲಹೆ ಮಾಡುವ ನಿರೀಕ್ಷೆ ಇದೆ.

ಮುಖ್ಯಮಂತ್ರಿಗಳ ಸಭೆಯಲ್ಲಿ ಸಾಮಾನ್ಯವಾಗಿ ನಕ್ಸಲ್ ಸಮಸ್ಯೆಯನ್ನು ಗಂಭೀರವಾಗಿ ಚರ್ಚಿಸುತ್ತಿರಲಿಲ್ಲ. ಆದರೆ ಛತ್ತೀಸಗಡದಲ್ಲಿ ಈಚೆಗೆ ನಕ್ಸಲೀಯರು ನಡೆಸಿದ ದಾಳಿಯಿಂದಾಗಿ ಈ ಸಭೆಗೆ ಮಹತ್ವ ಬಂದಿದೆ. ಈ ಬಗ್ಗೆ ಚರ್ಚಿಸಲೆಂದೇ ಬುಧವಾರ ವಿಶೇಷ ಸಭೆ ಆಯೋಜಿಸಲಾಗಿದೆ.

ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು ವಿಶೇಷ ತಂತ್ರ ರೂಪಿಸದೇ ಇರುವುದರಿಂದ ನಕ್ಸಲೀಯರು ನಡೆಸುವ ದಾಳಿಗಳು ಹೆಚ್ಚಿನ ಸಾವು-ನೋವಿನಲ್ಲಿ ಅಂತ್ಯ ಕಾಣುತ್ತವೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಮಾವೋವಾದಿಗಳ ಹಿಂಸಾಚಾರ ಹತ್ತಿಕ್ಕಲು ಪೊಲೀಸ್ ಠಾಣೆ ಸೇರಿದಂತೆ ತಳಹಂತದ ವ್ಯವಸ್ಥೆ ಬಲಪಡಿಸುವುದನ್ನು ವಿಶೇಷ ಕಾರ್ಯತಂತ್ರ ವ್ಯವಸ್ಥೆ ಒಳಗೊಂಡಿದೆ. ಕೇವಲ ಕೇಂದ್ರೀಯ ಅರೆಸೇನಾ ಪಡೆ ಬಳಸಿ `ಯುದ್ಧ' ಗೆಲ್ಲುವುದು ಅಸಾಧ್ಯ ಎಂಬುದನ್ನು ಸಚಿವಾಲಯದ ಅಧಿಕಾರಿಗಳು ಒಪ್ಪುತ್ತಾರೆ.

ನಕ್ಸಲೀಯರು ನಡೆಸುವ ದಾಳಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ ಬರುವ ಕಾರ್ಯಾಲಯಗಳೇ ಮೊದಲ ಗುರಿಯಾಗಿರುತ್ತವೆ. ಇವುಗಳನ್ನು ಬಲಪಡಿಸಿದ ಆಂಧ್ರ ಪ್ರದೇಶದ ಮಾದರಿ ಅನುಸರಿಸುವ ಕುರಿತು ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು. ಸಮರ್ಪಕ ಕಾರ್ಯಾಚರಣೆ ನಡೆಸಲು ಕಾನ್‌ಸ್ಟೆಬಲ್‌ನಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗಿನ ಎಲ್ಲ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಿಶೇಷ ತರಬೇತಿ ನೀಡುವುದೂ ಇದರಲ್ಲಿ ಸೇರಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಶರಣಾಗತರಾದ ನಕ್ಸಲೀಯರಿಗೆ ವಿಶೇಷ ಆದ್ಯತೆ ನೀಡಿ ಸೂಕ್ತ ಪುನರ್ವಸತಿ ಕಲ್ಪಿಸುವುದರಿಂದ, ಉಳಿದ ನಕ್ಸಲೀಯರು ಹಿಂಸಾಚಾರ ತೊರೆಯಲು ಪ್ರೇರೇಪಣೆ ನೀಡಿದಂತಾಗಲಿದೆ.

ನಕ್ಸಲೀಯರ ಹಿಂಸಾಚಾರಕ್ಕೆ ಸಿಲುಕಿದ ಮಹಾರಾಷ್ಟ್ರ, ಜಾರ್ಖಂಡ್, ಛತ್ತೀಸಗಡ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ವಿಶೇಷ ಪೊಲೀಸ್ ಕಾರ್ಯಪಡೆ ಸ್ಥಾಪನೆಗೆ ಕೇಂದ್ರ ಸರ್ಕಾರ ಈಗಾಗಲೇ ವಿಶೇಷ ಹಣಕಾಸು ನೆರವು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.