ADVERTISEMENT

ನಕ್ಸಲ್ ಪಿಡುಗು- ಗೌಡ ಆತಂಕ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯದ ಐದು ಜಿಲ್ಲೆಗಳಲ್ಲಿ ನಕ್ಸಲೀಯರ ಹಾವಳಿ ತ್ವರಿತಗತಿಯಲ್ಲಿ ಹೆಚ್ಚುತ್ತಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಆಂತರಿಕ ಭದ್ರತೆಗೆ ಸಂಬಂಧಿಸಿದ ಮುಖ್ಯಮಂತ್ರಿಗಳ ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು.

ಪಿಡುಗನ್ನು ಹತ್ತಿಕ್ಕಲು ರಾಜ್ಯದ ನಕ್ಸಲ್ ನಿಗ್ರಹ ಪೊಲೀಸ್ ಪಡೆಗೆ ತರಬೇತಿ, ಸೂಕ್ತ ಶಸ್ತ್ರಾಸ್ತ್ರ ಹಾಗೂ ಮೂಲಸೌಕರ್ಯ ವ್ಯವಸ್ಥೆಗೆ ಕೇಂದ್ರವು ನೆರವು ನೀಡಬೇಕು ಎಂದು ಆಗ್ರಹಿಸಿದರು.

ನಕ್ಸಲ್ ಹಾವಳಿ ತೀವ್ರವಾಗಿರುವ ರಾಜ್ಯಗಳಿಗೆ ಹೆಚ್ಚುವರಿ ಅನುದಾನ ನೀಡಲಾಗುತ್ತಿದೆ. ಆದರೆ ಕರ್ನಾಟಕ ಮಾತ್ರ ಇದರಿಂದ ವಂಚಿತವಾಗಿದೆ. ರಾಜ್ಯದ ಪಶ್ಚಿಮ ಘಟ್ಟಕ್ಕೆ ನುಸುಳಿ ತಮ್ಮ ಚಟುವಟಿಕೆಯನ್ನು ವಿಸ್ತರಿಸುವ ನಕ್ಸಲೀಯರ ಹುನ್ನಾರವು ಕೇಂದ್ರಕ್ಕೆ ಚೆನ್ನಾಗಿ ಗೊತ್ತಿದೆ. ನಕ್ಸಲ್ ನಿಗ್ರಹ ಪಡೆಯ ಬಲವರ್ಧನೆಗೆ ಕೇಂದ್ರದ ಬೆಂಬಲ ಬೇಕಿದೆ. ಸಿಬ್ಬಂದಿಗೆ ತರಬೇತಿ, ಹೆಚ್ಚುವರಿ ಅನುದಾನ ಮುಂತಾದ ವಿಷಯಗಳಲ್ಲಿ ಕೇಂದ್ರದಿಂದ ಈವರೆಗೆ ಯಾವುದೇ ನೆರವು ಸಿಕ್ಕಿಲ್ಲ ಎಂದು ಹೇಳಿದರು.

`
ಅರಣ್ಯ ಸಂರಕ್ಷಣೆ ಕಾಯ್ದೆಯನ್ನು ಸಡಿಲಗೊಳಿಸುವ ಮೂಲಕ ಅರಣ್ಯ ಪ್ರದೇಶಗಳಲ್ಲಿ ತುರ್ತು ಮೂಲಸೌಕರ್ಯ ವ್ಯವಸ್ಥೆಗೆ ನಕ್ಸಲ್ ಪೀಡಿತ ರಾಜ್ಯಗಳಿಗೆ ಅನುಮತಿ ನೀಡಲಾಗಿದೆ. ಆದರೆ ಕರ್ನಾಟಕದಲ್ಲಿ ಅವಕಾಶವೂ ಇಲ್ಲ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.