ADVERTISEMENT

ನಗರವಾಸಿಗಳಿಗೆ ನಿರುದ್ಯೋಗ ಸಮಸ್ಯೆ ಭೀತಿ!

ಬೆಂಗಳೂರು ಸೇರಿದಂತೆ ಆರು ಮಹಾನಗರಗಳಲ್ಲಿ ಆರ್‌ಬಿಐ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 19:49 IST
Last Updated 15 ಏಪ್ರಿಲ್ 2018, 19:49 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ನವದೆಹಲಿ: ದೇಶದಲ್ಲಿ ಈ ವರ್ಷ ಉದ್ಯೋಗ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಜತೆಗೆ ದಿನಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೆ ಏರುವ ಭೀತಿ ಬೆಂಗಳೂರಿಗರು ಸೇರಿದಂತೆ ದೇಶದ ಆರು ಮಹಾನಗರಗಳ ಜನರನ್ನು ಕಾಡುತ್ತಿದೆ.

ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್, ಕೋಲ್ಕತ್ತ ಮತ್ತು ನವದೆಹಲಿಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾರ್ಚ್‌ನಲ್ಲಿ ನಡೆಸಿದ ತ್ರೈಮಾಸಿಕ ಸಮೀಕ್ಷೆ ಜನರ ಇಂತಹ ಆತಂಕಗಳನ್ನು ತೆರೆದಿಟ್ಟಿದೆ.

ಡಿಸೆಂಬರ್‌ ಸಮೀಕ್ಷೆಗೆ ಹೋಲಿಸಿದರೆ ಮಾರ್ಚ್‌ ಸಮೀಕ್ಷೆಯಲ್ಲಿ ಗ್ರಾಹಕರ ಆತ್ಮವಿಶ್ವಾಸ ಮತ್ತಷ್ಟು ಕುಸಿದಿದೆ. ಬರುವ ವರ್ಷದಲ್ಲಿಯೂ ಈ ವಿಶ್ವಾಸ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ನಿರುದ್ಯೋಗ ಭೀತಿ ಗ್ರಾಹಕರ ಆತ್ಮವಿಶ್ವಾಸ ಕುಸಿತಕ್ಕೆ ಕಾರಣ ಎಂದು ಸಮೀಕ್ಷೆ ವಿಶ್ಲೇಷಿಸಿದೆ.

ADVERTISEMENT

ಮುಂದಿನ ಮೂರು ತಿಂಗಳು ಅಂದರೆ, ಜೂನ್‌ ಅಂತ್ಯದವರೆಗೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಕಾಣಲಿವೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ 80ರಷ್ಟು ನಗರ ನಿವಾಸಿಗಳು ಊಹಿಸಿದ್ದಾರೆ.

ಒಂದು ವರ್ಷದೊಳಗಾಗಿ ದಿನಬಳಕೆ ವಸ್ತುಗಳ ಬೆಲೆಗಳು ಅತ್ಯಂತ ವೇಗವಾಗಿ ಗಗನಕ್ಕೇರಲಿವೆ ಎಂದು ಶೇ 40ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

ಆಹಾರ ಸಾಮಗ್ರಿಗಳು ಮತ್ತು ಮನೆಗಳ ಬೆಲೆಗಳು ವೇಗವಾಗಿ ಏರುವ ಬಗ್ಗೆ ಜನರ ಆತಂಕವನ್ನು ಕಳೆದ ವಾರ ಬಿಡುಗಡೆಯಾದ ಸಮೀಕ್ಷೆ ತೆರೆದಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.