ADVERTISEMENT

ನಟಿ ನೂತನ್‌ ಜನ್ಮದಿನಕ್ಕೆ ಗೂಗಲ್‌ ಡೂಡಲ್‌ ಗೌರವ

​ಪ್ರಜಾವಾಣಿ ವಾರ್ತೆ
Published 4 ಜೂನ್ 2017, 10:38 IST
Last Updated 4 ಜೂನ್ 2017, 10:38 IST
ನಟಿ ನೂತನ್‌ ಜನ್ಮದಿನಕ್ಕೆ ಗೂಗಲ್‌ ಡೂಡಲ್‌ ಗೌರವ
ನಟಿ ನೂತನ್‌ ಜನ್ಮದಿನಕ್ಕೆ ಗೂಗಲ್‌ ಡೂಡಲ್‌ ಗೌರವ   

ಬೆಂಗಳೂರು: ಹಿಂದಿ ಸಿನಿಲೋಕದ ಹಿರಿಯ ನಟಿ ನೂತನ್ (ನೂತನ್‌ ಸಮರ್ಥ ಬೆಹ್ಲ್‌) ಅವರ 81ನೇ ಜನ್ಮದಿನಕ್ಕೆ ಗೂಗಲ್‌ ಡೂಡಲ್‌ ಗೌರವ ಸಲ್ಲಿಸಿದೆ.

1936ರ ಜೂನ್‌ 4ರಂದು ಜನಿಸಿದ್ದ ನೂತನ್‌‌ ಅವರ ಮನೆಯಲ್ಲಿ ಕಲಾದೇವಿ ನೆಲೆಯೂರಿಯಾಗಿತ್ತು. ಅವರ ಅಜ್ಜಿ ರತನ್‌ಬಾಯಿ, ತಾಯಿ ಶೋಭನಾ ಸಮರ್ಥ ಆ ಕಾಲಕ್ಕಾಗಲೇ ಹೆಸರಾಂತ ನಟಿಯರಾಗಿದ್ದರು. ತಂದೆ ಕುಮಾರಸೇನ್‌ ಸಮರ್ಥ ಅವರು ಕವಿ ಹಾಗೂ ನಿರ್ದೇಶಕರಾಗಿ ಹೆಸರು ಮಾಡಿದ್ದರು. ಇಂಥ ಪೋಷಕರಿಂದ ಕಲೆಯನ್ನು ಬಳುವಳಿಯಾಗಿ ಪಡೆದವರು ನೂತನ್‌.

‘ಚಂದನ್‌ ಸಾ ಬದನ್‌’ ಎಂಬ ಸುಂದರ ಗೀತೆಯನ್ನು (ಚಿತ್ರ–ಸರಸ್ವತಿ ಚಂದ್ರ) ಕೇಳಿದಾಗ ಬಾಲಿವುಡ್‌ನ ‘ಚಂದನದ ಗೊಂಬೆ’ ನೂತನ್ ಅವರ ಚಿತ್ರ ಕಣ್ಣಮುಂದೆ ಬರುತ್ತದೆ‌.

ADVERTISEMENT

‘ಮಿಸ್‌ ಇಂಡಿಯಾ’ ಪ್ರಶಸ್ತಿ ವಿಜೇತೆಯಾಗಿದ್ದ ಅವರು ನಾಲ್ಕು ದಶಕಗಳ ಅವಧಿಯಲ್ಲಿ 70ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. ಹಾಸ್ಯವನ್ನು ಸಲೀಸಾಗಿ ನಿಭಾಯಿಸಿದಷ್ಟೇ ಸರಳವಾಗಿ ‘ಬಂಧಿನಿ’ಯಂತಹ ಕ್ಲಿಷ್ಟ ಪಾತ್ರಗಳನ್ನು ನಿರ್ವಹಿಸಿ ಬಿಮಲ್‌ ರಾಯ್‌ ಅವರಂತಹ ನಿರ್ದೇಶಕರಿಂದ ಸೈ ಎನಿಸಿಕೊಂಡಿದ್ದರು.

‘ಸೀಮಾ’, ‘ಸುಜಾತಾ’, ‘ಬಂಧಿನಿ’, ‘ಮಿಲನ್‌’, ‘ಅನಾರಿ’, ‘ಪೇಯಿಂಗ್‌ ಗೆಸ್ಟ್‌’, ‘ಸರಸ್ವತಿ ಚಂದ್ರ’, ‘ಮೈ ತುಲಸಿ ತೇರೆ ಆಂಗನ್‌ ಕೀ’, ‘ಮೇರಿ ಜಂಗ್‌’, ‘ನಾಮ್‌’, ‘ಕರ್ಮ’, ‘ಸೌದಾಗರ್‌’ ಇವರ ನಟನೆಯ ಪ್ರಮುಖ ಚಿತ್ರಗಳು.

ಐದು ಬಾರಿ ಫಿಲ್ಮ್‌ಫೇರ್‌ ಪ್ರಶಸ್ತಿ ಗೌರಕ್ಕೆ ಭಾಜನರಾಗಿದ್ದ ಅವರು ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗ 1959ರಲ್ಲಿ ನೌಕಾಪಡೆಯ ಲೆಫ್ಟಿನೆಂಟ್‌ ರಜನೀಶ್‌ ಬೆಹ್ಲ್‌ ಅವರನ್ನು ಮದುವೆಯಾದರು.

ಬದುಕಿನ ಕೊನೆ ಉಸಿರಿನವರೆಗೆ ಕಲೆಯನ್ನೇ ಧ್ಯಾನಿಸುತ್ತಿದ್ದ ಅವರು 1991ರ ಫೆಬ್ರುವರಿ 21ರಂದು ತಮ್ಮ 54ನೇ ವಯಸ್ಸಿನಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.